ಕಾವೇರಿ ನೀರು ಹರಿಸುವಂತೆ ಕೋರ್ಟ್ ಆದೇಶ ಆಘಾತ ತಂದಿದೆ<bha>;</bha> ಸಲೀಂ ಅಹ್ಮದ್

KannadaprabhaNewsNetwork | Published : Oct 12, 2023 12:00 AM

ಸಾರಾಂಶ

ರಾಜ್ಯದಿಂದ ಮತ್ತೆ ಕಾವೇರಿ ನೀರು ತಮಿಳುನಾಡಿಗೆ ಹರಿಸಲು ನಮ್ಮಲ್ಲಿ ನೀರಿಲ್ಲ. ಈ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಸರ್ಕಾರ ಮಾಡಿದೆ.
ಕನ್ನಡಪ್ರಭ ವಾರ್ತೆ ಧಾರವಾಡ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕೋರ್ಟ್ ಆದೇಶದ ವಿಚಾರ ನಮಗೆ ಆಘಾತ ತಂದಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ಮತ್ತೆ ಕಾವೇರಿ ನೀರು ತಮಿಳುನಾಡಿಗೆ ಹರಿಸಲು ನಮ್ಮಲ್ಲಿ ನೀರಿಲ್ಲ. ಈ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಸರ್ಕಾರ ಮಾಡಿದೆ. ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸುತ್ತಾರೆ ಎಂದು ತಿಳಿಸಿದರು. ಕಾವೇರಿ ವಿಚಾರದಲ್ಲಿ ಪ್ರಧಾನ ಮಂತ್ರಿ ಏಕೆ ಮಧ್ಯಪ್ರವೇಶಿಸುತ್ತಿಲ್ಲ? ಕೇಂದ್ರ ಸಚಿವರು ಯಾಕೆ ಮಧ್ಯಸ್ಥಿಕೆ ವಹಿಸುತ್ತಿಲ್ಲ, ನಮ್ಮ ಸಂಸದರು ಏನು ಮಾಡುತ್ತಿದ್ದಾರೆ? ಅವರ ಮೇಲೆಯೂ ಜವಾಬ್ದಾರಿ ಇದೆ ಅಲ್ವಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ಬಂದಿದೆಯೆಂದು ಕೇಂದ್ರ ಸಚಿವರು ಹಾಗೂ ಸಂಸದರು ದೂರ ಹೋಗುವುದು ಸರಿಯಲ್ಲ. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿಗೆ ಸಮಯ ಕೇಳಿದ್ದೇವೆ. ಸರ್ವ ಪಕ್ಷಗಳ ಸಭೆಗೂ ಸಮಯ ಕೇಳಿದ್ದೇವೆ. ಇಲ್ಲಿ ವರೆಗೂ ಸಮಯ ಕೊಟ್ಟಿಲ್ಲ. ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಅಲ್ವಾ? ನಮ್ಮ ಕೇಂದ್ರ ಮಂತ್ರಿಗಳು, ಎಂಪಿಗಳು ರಾಜಕಾರಣ ಮಾಡುತ್ತಿಲ್ಲವಾ?ಎಂದು ಬಿಜೆಪಿಗೆ ಪ್ರಶ್ನಿಸಿದರು. ರಾಜ್ಯಕ್ಕೆ ಅನ್ಯಾಯವಾಗದಂತೆ ಕಾವೇರಿ ವಿಚಾರದಲ್ಲಿ ಪಕ್ಷಾತೀತವಾಗಿ ಹೋರಾಟ ಮಾಡಬೇಕಿದೆ. ಪ್ರಧಾನಿಗಳು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಆಗ್ರಹಿಸಿದರು

Share this article