ಗಂಗಾವತಿಗೆ ನ್ಯಾಯಾಲಯ ಮಂಜೂರು, ಕೊಪ್ಪಳ ವಕೀಲರ ಸಂಘದ ನಿರ್ಣಯಕ್ಕೆ ಖಂಡನೆ

KannadaprabhaNewsNetwork |  
Published : Oct 20, 2024, 02:06 AM IST
19ಉಳಉ10 | Kannada Prabha

ಸಾರಾಂಶ

ಗಂಗಾವತಿ ನಗರಕ್ಕೆ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಮಂಜೂರಿಯಾಗಿದ್ದು, ಇದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿರುವ ಕೊಪ್ಪಳ ಜಿಲ್ಲಾ ವಕೀಲರ ಸಂಘದ ನಿರ್ಣಯವನ್ನು ಇಲ್ಲಿಯ ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ. ಶನಿವಾರ ಗಂಗಾವತಿ ವಕೀಲರ ಸಂಘದಲ್ಲಿ ತುರ್ತುಸಭೆ ನಡೆಸಿದ ವಕೀಲರು, ಯಾವುದೇ ಹೋರಾಟಕ್ಕೂ ಸಿದ್ಧ ಎಂದರು.

ಗಂಗಾವತಿ: ಗಂಗಾವತಿ ನಗರಕ್ಕೆ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಮಂಜೂರಿಯಾಗಿದ್ದು, ಇದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿರುವ ಕೊಪ್ಪಳ ಜಿಲ್ಲಾ ವಕೀಲರ ಸಂಘದ ನಿರ್ಣಯವನ್ನು ಇಲ್ಲಿಯ ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ.

ಶನಿವಾರ ವಕೀಲರ ಸಂಘದಲ್ಲಿ ತುರ್ತುಸಭೆ ನಡೆಸಿದ ವಕೀಲರು, ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ಕಕ್ಷಿದಾರರಿಗೆ ಅನುಕೂಲವಾಗಲೆಂದು ಹೈಕೋರ್ಟಿನ ಶಿಫಾರಸಿನ ಮೇರೆಗೆ ರಾಜ್ಯ ಸರ್ಕಾರ ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ವಿಶೇಷ ಪ್ರಕರಣಗಳೊಂದಿಗೆ ಪೂರ್ತಿ ಪ್ರಮಾಣದ ಜಿಲ್ಲಾ ನ್ಯಾಯಾಲಯವಾಗಿ ಘೋಷಿಸಿತ್ತು. ಆದರೆ ಕೊಪ್ಪಳ ಜಿಲ್ಲಾ ವಕೀಲರ ಸಂಘ ಈ ವಿಷಯವನ್ನು ವಿರೋಧಿಸಿ ಹೋರಾಟ ನಡೆಸಲು ನಿರ್ಣಯ ಕೈಕೊಂಡು, ಕೋರ್ಟ್ ಕಲಾಪದಿಂದ ದೂರ ಉಳಿದು ಪ್ರತಿಭಟಿಸಿರುವುದು ವಿಷಾದನೀಯ ಸಂಗತಿ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿರುವ ವಕೀಲರು, ಕೊಪ್ಪಳ ಜಿಲ್ಲಾ ವಕೀಲರ ಸಂಘ ಪ್ರತಿ ಹಂತದಲ್ಲೂ ಗಂಗಾವತಿ ವಕೀಲರ ಸಂಘಕ್ಕೆ ಅಸಹಕಾರ ನೀಡುತ್ತಿದೆ. ಇದೇ ರೀತಿ ಅಸಹಕಾರ ಮುಂದುವರಿಸಿದರೆ ಮುಂದೆ ಒಂದು ದಿನ ಬೇರೆ ಜಿಲ್ಲೆ ಜತೆ ಸೇರುವ ಅಥವಾ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಮುಂದಿನ ದಿನಮಾನಗಳಲ್ಲಿ ಕೊಪ್ಪಳ ವಕೀಲರ ಸಂಘದಿಂದ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ಸ್ಪರ್ಧಿಸಿದರೆ ಅಂಥವರಿಗೆ ಗಂಗಾವತಿ ವಕೀಲರ ಸಂಘದಿಂದ ಬೆಂಬಲ ಸೂಚಿಸುವುದಿಲ್ಲ. ಕೊಪ್ಪಳ ಜಿಲ್ಲಾ ವಕೀಲರ ಸಂಘ ಎಂಬ ಹೆಸರನ್ನು ಬಳಸಿಕೊಂಡು ಅಖಂಡ ಗಂಗಾವತಿ ವಕೀಲರ ಸಂಘಕ್ಕೆ ಅನ್ಯಾಯ ಮಾಡುತ್ತಿದ್ದು, ಇದನ್ನು ಸಹ ಸಂಘ ತೀವ್ರವಾಗಿ ಖಂಡಿಸುತ್ತದೆ.

ಕೊಪ್ಪಳ ವಕೀಲರ ಸಂಘದ ನಡೆಯನ್ನು ತೀವ್ರವಾಗಿ ಖಂಡಿಸುತ್ತದೆ. ಗಂಗಾವತಿ ವಕೀಲರ ಸಂಘ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ನಿರ್ಣಯಿಸಲಾಯಿತು.

ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಉಪಾಧ್ಯಕ್ಷ ಪರಸಪ್ಪ ನಾಯಕ್, ಪ್ರಧಾನ ಕಾರ್ಯದರ್ಶಿ ಎಚ್.ಎಂ. ಮಂಜುನಾಥ, ಹಿರಿಯ ವಕೀಲ ಎಚ್.ಬಸನಗೌಡ, ಎಚ್.ಪ್ರಭಾಕರ್, ಎಸ್.ಎಸ್.ಪಟ್ಟಣಶೆಟ್ಟಿ, ಎಂ.ಪಂಪನಗೌಡ, ಡಿಎ ಹಾಲಸಮುದ್ರ, ನಾಗನಗೌಡ ಪಾಟೀಲ್, ಶರದ್ ದಂಡಿನ್, ಕೆ.ಕೃಷ್ಣಪ್ಪ, ಕೆ.ಅನಂತರಾವ್, ಮಹೇಶ್ ಕುಲಕರ್ಣಿ, ಶರಣಗೌಡ ಮಾಲಿ ಪಾಟೀಲ್, ಪ್ರಕಾಶ್ ಕುಸುಬಿ, ನಜಿರ್ ಹುಸೇನ್, ತ್ರಿಲೋಚನ್, ಶಿವಪ್ಪ ಯಲ್ಬುರ್ಗಿ, ನಾಗರಾಜ್ ಬೂದಿ, ಮಹೇಶ್ ತಳ್ವಾರ್, ಅರುಣ್, ಸಲೀಂ ಪಾಷಾ, ಅಕ್ಕಮಹಾದೇವಿ, ಸೌಭಾಗ್ಯ ಲಕ್ಷ್ಮಿ, ರಾಜೇಶ್ವರಿ, ರೋಜಾ, ಶರಣಮ್ಮ ಮತ್ತು ಇತರರು ಪಾಲ್ಗೊಂಡಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ