ಹೃದಯಾಘಾತಕ್ಕೆ ಕೋವಿಡ್‌ ವಾಕ್ಸಿನ್‌ ಕಾರಣವಲ್ಲ : ಹೃದ್ರೋಗ ತಜ್ಞ ಡಾ.ಶರತ್‌ಕುಮಾರ್

KannadaprabhaNewsNetwork |  
Published : Jul 13, 2025, 01:18 AM ISTUpdated : Jul 13, 2025, 01:07 PM IST
Covid Vaccine Heart Attack

ಸಾರಾಂಶ

ಕೋವಿಡ್ ವ್ಯಾಕ್ಸಿನ್‌ನಿಂದಾಗಿ ಹೃದಯ ಸಮಸ್ಯೆಯಾಗುತ್ತದೆ ಎಂಬ ವಿಚಾರವನ್ನು ತಲೆಯಿಂದ ತೆಗೆದುಹಾಕಿ, ಈ ಸಮಸ್ಯೆಗೆ ವ್ಯಾಕ್ಸಿನ್ ಕಾರಣವಲ್ಲ ಎಂದು ಸಿದ್ಧಗಂಗಾ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಶರತ್‌ಕುಮಾರ್ ಹೇಳಿದರು.

 ತುಮಕೂರು :  ಕೋವಿಡ್ ವ್ಯಾಕ್ಸಿನ್‌ನಿಂದಾಗಿ ಹೃದಯ ಸಮಸ್ಯೆಯಾಗುತ್ತದೆ ಎಂಬ ವಿಚಾರವನ್ನು ತಲೆಯಿಂದ ತೆಗೆದುಹಾಕಿ, ಈ ಸಮಸ್ಯೆಗೆ ವ್ಯಾಕ್ಸಿನ್ ಕಾರಣವಲ್ಲ ಎಂದು ಸಿದ್ಧಗಂಗಾ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಶರತ್‌ಕುಮಾರ್ ಹೇಳಿದರು.

ಇತ್ತೀಚೆಗ ಹೃದಯಾಘಾತದಿಂದ ಅಕಾಲಮರಣಕ್ಕೀಡಾದ ತುಮಕೂರು ತಾಲೂಕು ಊರುಕೆರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಹೆಬ್ಬಾಕದ ಎಚ್.ಎಸ್.ನೀಲಕಂಠಸ್ವಾಮಿ ಅವರ ಸ್ಮರಣಾರ್ಥ ಶನಿವಾರ ಹೆಬ್ಬಾಕ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೃದಯಾಘಾತ ಜಾಗೃತಿ, ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ, ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಹಲವಾರು ಕಾರಣಗಳಿಂದ ಹೃದಯ ಸಮಸ್ಯೆ, ಹೃದಯಾಘಾತ ಆಗಬಹುದು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಯೋಗ್ಯ ಅಭ್ಯಾಸಗಳನ್ನು ರೂಢಿಸಿಕೊಂಡರೆ ಆರೋಗ್ಯವಂತರಾಗಿ ಬಾಳಲು ಸಾಧ್ಯವಿದೆ. ನಿತ್ಯ ನಡಿಗೆ, ವ್ಯಾಯಾಮ ಮಾಡಬೇಕು. ಧೂಮಪಾನ, ಮದ್ಯಪಾನವನ್ನು ಬಿಡಬೇಕು. ನಮ್ಮ ಪರಿಸರದ ಆಹಾರ ಸೇವನೆ, ಒಳ್ಳೆಯ ನಿದ್ರೆ, ಮಾನಸಿಕ ಒತ್ತಡ ನಿಯಂತ್ರಣ ಮಾಡಿಕೊಂಡರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ ಮಾತನಾಡಿ, ಈಗಿನ ಒತ್ತಡದ ಬದುಕಿನಲ್ಲಿ ಹಣ, ಆಸ್ತಿ ಇದ್ದವರು ಶ್ರೀಮಂತರಲ್ಲ, ಆರೋಗ್ಯ ಹೊಂದಿರುವವರೇ ದೊಡ್ಡ ಶ್ರೀಮಂತರು. ಇಂದು ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ದೇಹವನ್ನು ದೇಗುಲವೆಂದು ಭಾವಿಸಿ, ದೇಹದ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಇತ್ತೀಚೆಗೆ ಹೃದಯಾಘಾತದ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಬಾಳಿಬದುಕಬೇಕಾದ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಳ್ಳುವಂತಾಗಿದೆ ಎಂಬುದು ನೋವಿನ ವಿಚಾರ. ಜೀವನಶೈಲಿ ಬದಲಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದೊಂದೇ ಇದಕ್ಕೆ ಪರಿಹಾರ ಎಂದರು. ದೇಹವನ್ನು ದಂಡಿಸದಿದ್ದರೆ ಸ್ವರ್ಗದಲ್ಲಿ ಕೆಂಡ ತಂದಿಕ್ಕುವರು ಎನ್ನುವಂತೆ ದೇಹದಂಡನೆ ಅಗತ್ಯ. ನಡೆಯುವುದು, ದುಡಿಯುವುದು, ವ್ಯಾಯಾಮ ದೇಹಕ್ಕೆ ಅಗತ್ಯ. ಇಂತಹ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಪರಮೇಶ್, ರಾಜ್ಯ ಗ್ರಾಮ ಪಂಚಾಯ್ತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಸಿದ್ಧಗಂಗಾ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ.ಮಂಜುನಾಥ ಗುಪ್ತ, ಡಾ.ಸುಚಿತ್, ಡಾ.ರಾಹುಲ್ ಮೊದಲಾದವರು ಭಾಗವಹಿಸಿದ್ದರು.

ಸಿದ್ಧಗಂಗಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ಸಮೂಹ ಸಂಘ ಹಾಗೂ ಊರುಕೆರೆ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸಾರ್ವಜನಿಕರಿಗೆ ಬಿ.ಪಿ., ಶುಗರ್, ಇಸಿಜಿ, ಕಣ್ಣಿನ ತಪಾಸಣೆ, ಚಿಕಿತ್ಸೆ, ಕನ್ನಡಕ ವಿತರಣೆ ಮತ್ತಿತರ ಆರೋಗ್ಯ ಸಮಸ್ಯೆಗಳ ಬಗ್ಗೆ ತಜ್ಞ ವೈದ್ಯರು ತಪಾಸಣೆ ಮಾಡಿದರು. ಹೆಬ್ಬಾಕ ಹಾಗೂ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನ ಆಗಮಿಸಿ ಶಿಬಿರದ ಪ್ರಯೋಜನ ಪಡೆದರು.

PREV
Read more Articles on

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ