ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) ನಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ. ಓರ್ವ ಸಿಬ್ಬಂದಿ ಗಂಭೀರ ಸ್ಥಿತಿಯಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಸಂಭವಿಸಿದೆ.ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ದೀಪ್ ಚಂದ್ರ ಭಾರತೀಯ(33) ಹಾಗೂ ಕೇರಳದ ಬಿಜಿಲ್ ಪ್ರಸಾದ್(33) ಮೃತಪಟ್ಟವರು. ಗದಗ್‌ನ ವಿನಾಯಕ್ ಗಂಭೀರ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶನಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಕೆಮಿಕಲ್ ವಿಭಾಗದ ಎಸಿಸ್ಟೆಂಟ್ ಆಪರೇಟಿಂಗ್ ಆಫೀಸರ್ ಆದ ಈ ಇಬ್ಬರು ಅಧಿಕಾರಿಗಳು ಫೀಲ್ಡ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಘಟಕದ (ಟ್ಯಾಂಕ್ FB7029 A - ಡ್ರೈ ಸ್ಲಾಪ್ ಸರ್ವಿಸ್, ಫ್ಲೋಟಿಂಗ್ ರೂಫ್) ಮೇಲ್ಭಾಗದ ಪ್ಲಾಟ್‌ಫಾರ್ಮ್‌ನಲ್ಲಿ ದೋಷ ಪರಿಶೀಲಿಸಲು ಮಾಸ್ಕ್ ಧರಿಸಿ ತೆರಳಿದ್ದರು. ಬಳಿಕ ಇಬ್ಬರೂ ತೊಟ್ಟಿಯ ಮೇಲ್ಭಾಗದ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಅವರನ್ನು ತಕ್ಷಣವೇ ಪ್ರಥಮ ಚಿಕಿತ್ಸೆಗಾಗಿ ಕೊಂಡೊಯ್ಯಲಾಯಿತು. ಸಮೀಪದ ಮುಕ್ಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೆ ಅವರು ಮೃತಪಟ್ಟರು.ಈ ಘಟನೆಯಲ್ಲಿ ಇಬ್ಬರ ರಕ್ಷಣೆಗೆ ಮುಂದಾದ ಇನ್ನೋರ್ವ ಸಿಬ್ಬಂದಿ ವಿನಾಯಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದ್ದು, ವೈದ್ಯರ ನಿಗಾದಲ್ಲಿದ್ದಾರೆ. ಇದೇ ವೇಳೆ ವಿಷಾನಿಲ ಸೋರಿಕೆಯನ್ನು ತಂತ್ರಜ್ಞರ ತಂಡ ಕೂಡಲೇ ಸರಿಪಡಿಸಿದೆ.
ತನಿಖೆಗೆ ಉನ್ನತ ಸಮಿತಿ ರಚನೆ:ಈ ಬಗ್ಗೆ ಮಾಹಿತಿ ನೀಡಿರುವ ಎಂಆರ್ಪಿಎಲ್ನ ಚೀಫ್ ಜನರಲ್ ಮ್ಯಾನೇಜರ್ ಡಾ. ರುಡಾಲ್ಫ್ ನೊರೊನ್ಹಾ, ಈ ಘಟನೆಯ ಕುರಿತು ವಿವರವಾದ ತನಿಖೆ ನಡೆಸಲು ಗ್ರೂಪ್ ಜನರಲ್ ಮ್ಯಾನೇಜರ್ಗಳ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಜೊತೆಗೆ ಎಲ್ಲ ಸಂಬಂಧಿತ ಕಾನೂನಾತ್ಮಕ ಪ್ರಾಧಿಕಾರಗಳಿಗೆ ಮಾಹಿತಿಯನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗರಿಷ್ಠ ಪರಿಹಾರಕ್ಕೆ ಜಿಲ್ಲಾಡಳಿತ ಸೂಚನೆ:ಎಂಆರ್‌ಪಿಎಲ್‌ನಲ್ಲಿ ದುರಂತ ನಡೆದ ಘಟನಾ ಸ್ಥಳಕ್ಕೆ ಜಿಲ್ಲಾಡಳಿತ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.ಬಳಿಕ ಎಂಆರ್‌ಪಿಎಲ್ ಎಂಡಿ ಜೊತೆ ಚರ್ಚಿಸಿ, ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಸೂಚಿಸಿದ್ದಾರೆ. ಸಾವಿಗೀಡಾದ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡಲು ಮತ್ತು ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲು ತಿಳಿಸಿದ್ದಾರೆ.ಕುಟುಂಬಸ್ಥರ ಹೇಳಿಕೆಯಡಿ ಕೇಸ್:
ಸದ್ಯ ಎಂಆರ್‌ಪಿಎಲ್ ಅಗ್ನಿಶಾಮಕ ಮತ್ತು ಸುರಕ್ಷತಾ ತಂಡಗಳು ಅನಿಲ ಸೋರಿಕೆಯನ್ನು ಸರಿಪಡಿಸಿವೆ. ಈಗ ಯಾವುದೇ ಸಮಸ್ಯೆಯಿಲ್ಲ. ರಕ್ಷಣೆಗೆ ಹೋದ ಗದಗದ ವಿನಾಯಕ್ ಎಂಬುವರು ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಅವರು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಮೃತರ ಕುಟುಂಬಸ್ಥರ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.------------------