ಕೋವಿಶೀಲ್ಡ್‌ ಅಡ್ಡ ಪರಿಣಾಮವಿದ್ರೂ ತೀರಾ ವಿರಳ

KannadaprabhaNewsNetwork | Published : May 6, 2024 12:34 AM

ಸಾರಾಂಶ

ಕೊರೋನಾ ಸಮಯದಲ್ಲಿ ಪಡೆದಿರುವ ಕೋವಿಶೀಲ್ಡ್ ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗುವುದು ಸತ್ಯ. ಆದರೆ ಅಡ್ಡಪರಿಣಾಮ ಪ್ರಕರಣಗಳು ಬಹಳ ವಿರಳವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಕೊರೋನಾ ಸಮಯದಲ್ಲಿ ಪಡೆದಿರುವ ಕೋವಿಶೀಲ್ಡ್ ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗುವುದು ಸತ್ಯ. ಆದರೆ ಅಡ್ಡಪರಿಣಾಮ ಪ್ರಕರಣಗಳು ಬಹಳ ವಿರಳವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಸ್ಟ್ರಾಜೆನಿಕಾ ತನ್ನ ಕೊರೋನಾ ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗುತ್ತದೆ ಎಂದು ಒಪ್ಪಿಕೊಂಡಿದೆ. ಲಸಿಕೆಯಿಂದ ಥ್ರೋಂಬೋಸಿಸ್‌ ವಿತ್‌ ಥ್ರೋಂಬೋಸೈಟೋಪೇನಿಯಾ ಸಿಂಡ್ರೋಮ್‌ (ಟಿಎಸ್‌ಎಸ್‌) ಎಂಬ ಸಮಸ್ಯೆ ಉಂಟಾಗುವುದಾಗಿ ಹೇಳಿದೆ. ಇದರಿಂದ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ರಕ್ತ ಕಣಗಳ ಸಂಖ್ಯೆ ಕಡಿಮೆ ಆಗುತ್ತದೆ. ಇದೇ ವೇಳೆ ಇದು ಬಹಳ ವಿರಳವಾಗಿ ಕಾಣಿಸಿಕೊಳ್ಳುತ್ತದೆ ಎಂದೂ ಸ್ಪಷ್ಟಪಡಿಸಿದೆ.

ಇದರ ಬೆನ್ನಲ್ಲೇ ಅಸ್ಟ್ರಾಜೆನಿಕಾ ಸಂಸ್ಥೆಯ ಭಾರತೀಯ ಆವೃತ್ತಿಯಾದ ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಆತಂಕ ಶುರುವಾಗಿದೆ. ನಮ್ಮ ದೇಶದಲ್ಲಿ ಜನರಿಗೆ ಕೋವಿಶೀಲ್ಡ್‌ ಲಸಿಕೆ ನೀಡಲು ಸರ್ಕಾರ ಅನುಮತಿಸಿದ್ದು ಯಾಕೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಶುರುವಾಗಿದೆ. ಈ ಲಸಿಕೆಯಿಂದ ಬಹುತೇಕ ಭಾರತೀಯರು ಟಿಎಸ್‌ಎಸ್‌ ಸಮಸ್ಯೆಗೆ ತುತ್ತಾಗಿದ್ದು, ಚಿಕ್ಕ ವಯಸ್ಸಿನವರಲ್ಲೇ ಹೃದಯಾಘಾತಗಳು ಹೆಚ್ಚಾಗಿವೆ ಎಂಬ ಆರೋಪ ಕೇಳಿ ಬಂದಿದೆ.

ಟಿಎಸ್‌ಎಸ್‌ ಸಮಸ್ಯೆ ಉಂಟಾದರೆ ಉಸಿರಾಟ ತಗ್ಗುವಿಕೆ, ಎದೆ ನೋವು, ಕಾಲು ಊದಿಕೊಳ್ಳುವುದು, ನಿರಂತರ ತಲೆ ನೋವು ಹಾಗೂ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ರಕ್ತ ಹೆಪ್ಪು ಗಟ್ಟುವಿಕೆಯಿಂದ ಹೃದಯಾಘಾತವೂ ಸಂಭವಿಸಬಹುದು ಎನ್ನಲಾಗಿದೆ.

ಕಂಪನಿಯ ಈ ಹೇಳಿಕೆ ಬಗ್ಗೆ ತಜ್ಞರು ಹಲವು ಸ್ಪಷ್ಟನೆ ನೀಡಿ ಆತಂಕದ ಅಗತ್ಯವಿಲ್ಲ ಎಂದಿದ್ದಾರೆ.

ಅತ್ಯಂತ ವಿರಳ- ತಜ್ಞರು:

‘ಕೋವಿಶೀಲ್ಡ್‌ನಿಂದ ಟಿಎಸ್‌ಎಸ್‌ ಅಡ್ಡ ಪರಿಣಾಮ ಉಂಟಾಗುವುದು ಅತ್ಯಂತ ವಿರಳ. ಒಂದು ವೇಳೆ ಲಸಿಕೆ ಪಡೆದ ಜನರ ಪೈಕಿ ಭಾರೀ ಪ್ರಮಾಣದಲ್ಲಿ ಟಿಎಸ್‌ಎಸ್‌ನಿಂದ ಸಾವು ಸಂಭವಿಸಿದ್ದರೆ ಆತಂಕ ಪಡಬೇಕಾಗಿತ್ತು. ಆದರೆ ಐಸಿಎಂಆರ್‌ನ ಮಾಜಿ ವಿಜ್ಞಾನಿ ಡಾ. ರಾಮನ್‌ ಗಂಗಾಖೇಡ್ಕರ್‌ ಅವರು 10 ಲಕ್ಷದಲ್ಲಿ ಏಳು ಮಂದಿಗೆ ಮಾತ್ರ ಕೋವಿಶೀಲ್ಡ್‌ ಲಸಿಕೆಯಿಂದ ಸಮಸ್ಯೆಯಾಗುತ್ತಿದೆ. ಹೀಗಾಗಿ ಅಡ್ಡ ಪರಿಣಾಮ ವಿರಳ’ ಎಂದು ತಜ್ಞರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಸಿ. ನಾಗರಾಜು, ‘ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮಗಳ ಕುರಿತು ಆತಂಕ ಪಡುವ ಅಗತ್ಯವಿಲ್ಲ. ಕೇವಲ ಕೋವಿಶೀಲ್ಡ್‌ ಲಸಿಕೆ ಮಾತ್ರವಲ್ಲ ಬೇರೆ ಕೊರೋನಾ ಲಸಿಕೆಗಳಿಂದಲೂ ಅಡ್ಡ ಪರಿಣಾಮ ಇರುತ್ತದೆ. ಅಷ್ಟೇಕೆ ಬೇರೆ ಕಾಯಿಲೆಗಳಿಗೆ ನೀಡುವ ಲಸಿಕೆಗಳಿಂದಲೂ ಅಡ್ಡ ಪರಿಣಾಮ ಇರುತ್ತದೆ. ಹೆಚ್ಚು ಮಂದಿಗೆ ಸಮಸ್ಯೆಯಾದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಯದೇವ ಹೃದ್ರೋಗ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌, ‘ಕಳೆದ 15 ವರ್ಷಗಳಿಂದ ಯುವಕರಲ್ಲಿ ಹೃದಯಾಘಾತ ಪ್ರಮಾಣ ಶೇ.22 ರಷ್ಟು ಹೆಚ್ಚಾಗಿದೆ. ಹೀಗಾಗಿ ಸಣ್ಣ ವಯಸ್ಸಿನವರಲ್ಲಿನ ಹೃದಯಾಘಾತಕ್ಕೆ ಲಸಿಕೆ ಕಾರಣ ಎನ್ನಲಾಗದು. ಇನ್ನು ಲಸಿಕೆ ಪಡೆದು ಮೂರು ವರ್ಷ ಕಳೆದಿದ್ದು, ಈ ಹಿಂದೆಯೂ ಇಂತಹ ಸುದ್ದಿ ಹರಡಿತ್ತು. ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.ನಾನೂ ಕೋವಿಶೀಲ್ಡ್‌ 3 ಡೋಸ್‌ ಪಡೆದು ಆರೋಗ್ಯವಾಗಿದ್ದೇನೆ: ಸಿ.ಸಿ.ಪಾಟೀಲ

ಅಸಹಾಯಕನ ಕೊನೇ ಅಸ್ತ್ರ ಅಪಪ್ರಚಾರ. ಇದು ಕಾಂಗ್ರೆಸ್‌ಗೆ ಅನ್ವಯಿಸುತ್ತೆ. ಕೊರೊನಾ ಕಾಲದಲ್ಲಿ ನಾನೂ ಕೋವಿಶೀಲ್ಡ್‌ನ ಮೂರು ಡೋಸ್‌ ತೆಗೆದುಕೊಂಡಿದ್ದೇನೆ. ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿನೂ ತೆಗೆದುಕೊಂಡಿರಬಹುದು. ಸುಮ್ಮನೇ ಅಪಪ್ರಚಾರ ಮಾಡಬಾರದು ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ.ದಾವಣಗೆರೆಯಲ್ಲಿ ಶನಿವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಪ್ರಿಯಾಂಕಾ ಗಾಂಧಿ, ವರದಿಗಳ ಪ್ರಕಾರ, ಶೇ. 1ರಿಂದ ಶೇ.2ರಷ್ಟು ಕೋವಿಡ್‌ ಲಸಿಕೆ ಪಡೆದವರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದರು. ಭಾನುವಾರ ಗದಗದಲ್ಲಿ ಮಾತನಾಡಿದ ಸಿ.ಸಿ.ಪಾಟೀಲ್‌, ಪ್ರಿಯಾಂಕಾರ ಹೇಳಿಕೆಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರತಿ ಬಡ ಕುಟುಂಬಕ್ಕೆ ಮಹಾಲಕ್ಷ್ಮೀ ಯೋಜನೆಯಡಿ ಪ್ರತಿ ವರ್ಷ ಒಂದು ಲಕ್ಷ ರು. ನೀಡುವುದಾಗಿ ಹೇಳಿಕೊಂಡಿದೆ. ದೇಶದ ಬಜೆಟ್‌ಗೆ ಮೀರಿದ ಹಣ ನೀಡುವುದಾಗಿ ಮತದಾರರಿಗೆ ಆಮಿಷ ಒಡ್ಡುತ್ತಿರುವುದು ಹಾಸ್ಯಾಸ್ಪದ. ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು 272 ಸ್ಥಾನ ಬೇಕು. ಆದರೆ, ಕಾಂಗ್ರೆಸ್ ಸ್ಪರ್ಧಿಸಿರುವುದೇ ಕೇವಲ 230 ಸ್ಥಾನಗಳಲ್ಲಿ. ಹೀಗಾಗಿ, ಕಾಂಗ್ರೆಸ್ ಅಧಿಕಾರಕ್ಕೇ ಬರುವುದಿಲ್ಲ, ಇನ್ನು ದೇಶದ ಮಹಿಳೆಯರಿಗೆ ₹1 ಲಕ್ಷ ಕೊಡಲು ಹೇಗೆ ಸಾಧ್ಯ? ಎಂದು ಹೇಳಿದರು.ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸವು ಖಾಲಿಯಾಗಿದೆ, ಶಾಸಕರ ಸಂಬಳವೂ ಎರಡು ತಿಂಗಳಿಗೊಮ್ಮೆ ಆಗುತ್ತಿವೆ. ಇದು ರಾಜ್ಯ ಸರ್ಕಾರದ ಆಡಳಿತ ವೈಖರಿ ಎಂದು ಗಂಭೀರ ಆರೋಪ ಮಾಡಿದರು.

Share this article