ಗೋವು ಪೂಜ್ಯನೀಯ, ಗೌರವಾನ್ವಿತ ಪ್ರಾಣಿ: ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ

KannadaprabhaNewsNetwork | Published : Feb 28, 2025 12:45 AM

ಸಾರಾಂಶ

ಗೋವುಗಳ ರಕ್ಷಣೆಯಿಂದ ಬದುಕು ಹಸನಾಗುತ್ತದೆ. ಎಲ್ಲರೂ ಆಸ್ತಿ, ಅಂತಸ್ತು ಗಳಿಸುವ ಧಾವಂತದಲ್ಲಿ ಧರ್ಮ ಮರೆಯುತ್ತಿದ್ದಾರೆ. ಇದರಿಂದ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಕಣ್ಮರೆಯಾಗುತ್ತಿದೆ. ಹೀಗಾಗಿ ಎಲ್ಲರೂ ಧರ್ಮ ಜಾಗೃತಿ ಕೆಲಸದಲ್ಲಿ ತೊಡಗಬೇಕು.

ಹಿರೇಕೆರೂರು: ವಿಜ್ಞಾನ ಎಷ್ಟೇ ಮುಂದುವರಿದರೂ ರೈತ ಬೆವರು ಸುರಿಸಿದಾಗ ಮಾತ್ರ ನಮ್ಮ ಜೀವನ. ದೇಶದ ಬೆನ್ನೆಲುಬು ರೈತ. ಕೃಷಿಕರ ಬೆನ್ನೆಲುಬು ಎತ್ತುಗಳು.(ಮೂಕಪ್ಪ ಸ್ವಾಮಿಗಳು ). ಹಿಂದೂ ಧರ್ಮದಲ್ಲಿ ಹಸು ದೇವರ ಸಮಾನ ಪೂಜ್ಯನೀಯ ಹಾಗೂ ಗೌರವಾನ್ವಿತ ಪ್ರಾಣಿ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.ತಾಲೂಕಿನ ಸಾತೇನಹಳ್ಳಿ ಶ್ರೀ ಶಿವಾಲಿ ಬಸವೇಶ್ವರ ಮೂಕಪ್ಪ ಸ್ವಾಮಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧರ್ಮಜಾಗೃತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ನೇತೃತ್ವವನ್ನು ವಹಿಸಿ ಶ್ರೀಮಠದ ಗೌರವಾಧ್ಯಕ್ಷ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಗೋವುಗಳ ರಕ್ಷಣೆಯಿಂದ ಬದುಕು ಹಸನಾಗುತ್ತದೆ. ಎಲ್ಲರೂ ಆಸ್ತಿ, ಅಂತಸ್ತು ಗಳಿಸುವ ಧಾವಂತದಲ್ಲಿ ಧರ್ಮ ಮರೆಯುತ್ತಿದ್ದಾರೆ. ಇದರಿಂದ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಕಣ್ಮರೆಯಾಗುತ್ತಿದೆ. ಹೀಗಾಗಿ ಎಲ್ಲರೂ ಧರ್ಮ ಜಾಗೃತಿ ಕೆಲಸದಲ್ಲಿ ತೊಡಗಬೇಕು ಎಂದರು. ನಂತರ ಸಮ್ಮುಖ ವಹಿಸಿದ್ದ ಶಾಂತಪುರ ಸಂಸ್ಥಾನಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಯಲವಟ್ಟಿ ಯೋಗಾನಂದ ಶ್ರೀಗಳು ಆಶೀರ್ವಚನ ನೀಡಿದರು. ಶಿವಮೊಗ್ಗ ಆಯುರ್ವೇದ ಆಸ್ಪತ್ರೆಯ ಡಾ. ವಾಸುದೇವ ಪ್ರಸಾದ ಅವರು ಅರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು.

ನಂತರ ವೃಷಭ ರೂಪಿ ಶಿವಾಲಿ ಬಸವೇಶ್ವರ ಹಿರಿಯ ಮತ್ತು ಕಿರಿಯ ಮೂಕಪ್ಪ ಸ್ವಾಮಿಗಳಿಗೆ ಭಕ್ತರಿಂದ ಧಾನ್ಯ ಹಾಗೂ ನಾಣ್ಯಗಳಿಂದ ತುಲಾಭಾರ ಸೇವೆ ನಡೆಯಿತು. ಕಾರ್ಯಕ್ರಮದ ಸಾನ್ನಿಧ್ಯವನ್ನು ಸಾತೇನಹಳ್ಳಿ ಶ್ರೀಮಠದ ಶಿವಾಲಿ ಬಸವೇಶ್ವರ ಹಿರಿಯ ಮತ್ತು ಕಿರಿಯ ಮೂಕಪ್ಪ ಸ್ವಾಮಿಗಳು ವಹಿಸಿದ್ದರು. ಶ್ರೀಮಠದ ಅಧ್ಯಕ್ಷ ಸುಭಾಸ್ ಮಾನೇರ, ಶಿವಮೊಗ್ಗ ಜಿಲ್ಲಾ ಕೆಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಚನ್ನವೀರಪ್ಪ ಎಸ್., ಗ್ರಾಪಂ ಅಧ್ಯಕ್ಷೆ ಶ್ರೀಮತಿ ಫ. ದೊಡ್ಡ ಉಪ್ಪಾರ, ಗ್ರಾಪಂ ಉಪಾಧ್ಯಕ್ಷರಾದ ರಾಮಚಂದ್ರ ಬಾರ್ಕಿ, ಸದಸ್ಯರಾದ ಕಾಂತೇಶ್ ಈಳಿಗೇರ್, ಶಂಭು ಮಾನೇರ, ನಿರ್ಮಲಾ ಯಲಿವಾಳ, ಶಶಿಕಲಾ ಪೂಜಾರ್, ಗೀತಾ ಭಜಂತ್ರಿ, ಸವಿತಾ ತಳವಾರ್, ರುದ್ರಪ್ಪ ಹೊಂಬರಡಿ ಹಾಗೂ ಹನುಮವ್ವ ಫ. ಅರಳಿಕಟ್ಟಿ, ಶಾರದಮ್ಮ ಕಾಯಕದ, ಜಯಮ್ಮ ನಾಗರಾಜ್ ಇತರರು ಪಾಲ್ಗೊಂಡಿದ್ದರು.ತುಂತುರು ನೀರಾವರಿ ಘಟಕ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಹಾವೇರಿ: ಕೃಷಿ ಇಲಾಖೆ ವತಿಯಿಂದ ಪ್ರಸಕ್ತ 2024- 25ನೇ ಸಾಲಿನ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕಗಳ(ಸ್ಪಿಂಕ್ಲರ್) ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಸೂಕ್ಷ್ಮ ನೀರಾವರಿ ಘಟಕ(ಸ್ಪಿಂಕ್ಲರ್) ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ ರೈತರು ಕಡ್ಡಾಯವಾಗಿ ಚಾಲ್ತಿ ಸಾಲಿನ ಅಥವಾ ನವೀಕರಿಸಿದ ಆರ್.ಡಿ. ನಂಬರ್ ಹೊಂದಿದ ಜಾತಿ ಪ್ರಮಾಣಪತ್ರಗಳೊಂದಿಗೆ ಅರ್ಜಿ ಸಲ್ಲಿಸಬೇಕು.ಪರಿಶಿಷ್ಟ ವರ್ಗದ ರೈತರು ಈಗಾಗಲೇ ಸ್ಪಿಂಕ್ಲರ್ ಸವಲತ್ತು ಪಡೆದಿದ್ದಲ್ಲಿ, ಹೆಚ್ಚುವರಿ ವಿಸ್ತೀರ್ಣ ಅಂದರೆ 2 ಎಕರೆ 20 ಗುಂಟೆಯಿಂದ 5 ಎಕರೆ ವರೆಗಿನ ಹೆಚ್ಚುವರಿ ಜಮೀನಿನ ವಿಸ್ತೀರ್ಣಕ್ಕೆ ಮೊತ್ತೊಮ್ಮೆ ಸ್ಪಿಂಕ್ಲರ್ ಪಡೆಯಬಹುದು.ಆಸಕ್ತ ರೈತರು ತಮ್ಮ ಆಧಾರ ಕಾರ್ಡ್ ಅಥವಾ ಗುರುತಿನ ಚೀಟಿ, ಅ ಖಾತೆ ಉತಾರ, ಆರ್‌ಟಿಸಿ ಉತಾರ, ಬೆಳೆ ಹಾಗೂ ನೀರಾವರಿ ಮೂಲದ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ಹಾಗೂ 3 ಪಾಸ್ ಪೋರ್ಟ್‌ ಅಳತೆಯ ಛಾಯಾಚಿತ್ರಗಳೊಂದಿಗೆ ಸಂಬಂಧಿಸಿದ ಹೋಬಳಿ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article