ನಾಪೋಕ್ಲು: ಸಮೀಪದ ಚೆಯ್ಯಂಡಾಣೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಯಂದಡ ಗ್ರಾಮದಲ್ಲಿ ಹುಲಿಯೊಂದು ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ನರಿಯಂದಡ ಗ್ರಾಮದ ನಿವಾಸಿ ಮಕ್ಕಿಮನೆ ಜಯಶಂಕರ್ ಅವರಿಗೆ ಸೇರಿದ ಹಸುವನ್ನು ಹುಲಿ ಬಲಿ ಪಡೆದಿದ್ದು, ಹಸುವಿನ ಅರ್ಧಭಾಗವನ್ನು ತಿಂದು ಹಾಕಿದೆ. ಭಾನುವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಸ್ಥಳದ ಸಮೀಪದಲ್ಲೇ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿವೆ. ನರಿಯಂದಡ ಗ್ರಾಮಸ್ಥ ಪೊಕ್ಕುಳಂಡ್ರ ಧನುಜ್ ಘಟನೆಯ ಕುರಿತು ಪ್ರತಿಕ್ರಿಯಿಸಿ ಆನೆಗಳ ಕಾಟದಿಂದ ಬೇಸತ್ತು ಜನರು ಬೆಳೆ ಬೆಳೆಯುವುದನ್ನೇ ಬಿಟ್ಟಿದ್ದಾರೆ. ಹುಲಿ ದಾಳಿ ಕುರಿತು ಅರಣ್ಯ ಇಲಾಖೆಗೆ ತಕ್ಷಣವೇ ಮಾಹಿತಿ ಮುಟ್ಟಿಸಿದ್ದರೂ, ಹಿರಿಯ ಅಧಿಕಾರಿಗಳು ಇದುವರೆಗೆ ಸ್ಥಳಕ್ಕೆ ಬಂದಿಲ್ಲ. ಕೇವಲ ಕ್ಯಾಂಪ್ ಸಿಬ್ಬಂದಿ ಮಾತ್ರ ಬಂದು ಮಹಜರು ನಡೆಸಿದ್ದಾರೆ. ಡಿಎಫ್‌ಒ ಹಾಗೂ ಆರ್‌ಎಫ್‌ಒಗೆ ಮಾಹಿತಿ ನೀಡಲಾಗಿದ್ದು, ರಾತ್ರಿ ವೇಳೆ ಹುಲಿ ಮತ್ತೆ ಬರುವ ಸಾಧ್ಯತೆಯಿದೆ. ತಕ್ಷಣವೇ ಬೋನು ತಂದು ಹುಲಿಯನ್ನು ಹಿಡಿಯುವ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಗ್ರಾಮಸ್ಥರಾದ ಬಿಳಿಯಂಡ್ರ ಹರಿಪ್ರಸಾದ್, ಅರಣ್ಯಾಧಿಕಾರಿಗಳು ಕ್ರಮವಹಿಸುವಂತೆ ಒತ್ತಾಯಿಸಿದ್ದಾರೆ. ಹಸುವಿನ ಮಾಲೀಕ ಮಕ್ಕಿಮನೆ ಜಯಶಂಕರ್ ಮಾತನಾಡಿ, ಆನೆಗಳ ಕಾಟ ನಮಗೆ ಸಾಮಾನ್ಯವಾಗಿತ್ತು, ಅಲ್ಲದೆ ಕಾಡುಹಂದಿಗಳು ಬೆಳೆಗಳನ್ನು ನಾಶ ಮಾಡುತ್ತಿವೆ. ಈಗ ಹುಲಿಗಳ ಹಾವಳಿ ಶುರುವಾಗಿದೆ. ಇದರಿಂದ ಬೆಳೆ ನಷ್ಟದ ಜೊತೆಗೆ ಹೊರಗೆ ಓಡಾಡುವುದೇ ಬಾರಿ ಕಷ್ಟವಾಗಿದೆ. ಸರ್ಕಾರ ಸೂಕ್ತ ಪರಿಹಾರವನ್ನು ಕೊಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.