ಕುಶಾಲನಗರ: ಯೋಜನೆಗಳನ್ನು ರೂಪಿಸುವುದರೊಂದಿಗೆ ಅದರ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಉದ್ಯಮಿ ಟಿ.ಎಲ್.ಪ್ರವೀಣ್ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮೈಸೂರು ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ನ ಅಧ್ಯಕ್ಷ ಡಾ.ಲಿಂಗರಾಜು ಮಾತನಾಡಿ, ಕೊಡಗು ಮೈಸೂರು ಜಿಲ್ಲೆಗಳು ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ. ಕೊಡಗು ಜಿಲ್ಲೆಯಲ್ಲಿ ಕೈಗಾರಿಕೆ ಮತ್ತು ದೊಡ್ಡ ಉದ್ದಿಮೆಗಳನ್ನು ಸ್ಥಾಪಿಸಲು ಉತ್ತಮ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜಂಟಿಯಾಗಿ ಶ್ರಮಿಸಲು ಪರಸ್ಪರ ಕೈಜೋಡಿಸೋಣ ಎಂದು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಸದಾ ಕ್ರಿಯಾಶೀಲವಾಗಿ ಜನಪರ ಕೆಲಸ ಮಾಡುತ್ತಿರುವ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿಯ ಬಗ್ಗೆ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್ ಸಂತಸ ವ್ಯಕ್ತಪಡಿಸಿದರು.ಸಹಕಾರ ಬೇಕು: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಗಿರೀಶ್ ಗಣಪತಿ ಮಾತನಾಡಿ, ಬ್ಯಾಂಕ್ 2027 ರ ಜನವರಿಯಲ್ಲಿ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದೆ, ಜಿಲ್ಲೆಯ ಎಲ್ಲ ವರ್ತಕ ಬಂಧುಗಳು ಸರ್ವ ರೀತಿಯಲ್ಲೂ ಸಹಕರಿಸುವಂತೆ ಕೋರಿದರು.
ಡಿಸೆಂಬರ್ ತಿಂಗಳ 18 ರಿಂದ ಮೂರು ದಿನಗಳ ಕಾಲ 2ನೇ ವರ್ಷದ ಕನ್ಸೂಮರ್ ಫೇರ್ ನಡೆಸಲಾಗುತ್ತದೆ. ಎಕ್ಸ್ಪೋ ಗೆ ರಾಜ್ಯದ ಮತ್ತು ಕೇಂದ್ರ ಸಚಿವರುಗಳನ್ನು ಆಹ್ವಾನಿಸಿ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಚೇಂಬರ್ ಸ್ಥಾನೀಯ ಸಮಿತಿಯ ಸ್ಥಾಪಕ ಕಾರ್ಯದರ್ಶಿ ಹಿರಿಯ ಪತ್ರಕರ್ತರಾದ ಬಿ.ಆರ್.ನಾರಾಯಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯದರ್ಶಿ ಚಿತ್ರ ರಮೇಶ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಎನ್ ವಿ ಬಾಬು ಲೆಕ್ಕಪತ್ರ ಮಂಡಿಸಿದರು. ಮೈಸೂರು ಚೇಂಬರ್ ಕಾರ್ಯದರ್ಶಿ ಶಿವಾಜಿ ರಾವ್, ಸ್ಥಾನೀಯ ಸಮಿತಿಯ ನಿರ್ದೇಶಕ ಎಸ್.ಕೆ.ಸತೀಶ್, ಪಿ ಎಂ ಮೋಹನ್, ಅಶ್ವಿನಿ ರೈ, ಮುಖೇಶ್ ಜೈನ್, ಹೆಚ್.ಎಂ.ಚಂದ್ರು, ಕೆ.ಎನ್.ದೇವರಾಜ್, ಜನಾರ್ಧನ ಪ್ರಭು ಹಾಗೂ ಚೇಂಬರ್ ಸದಸ್ಯರು ಇದ್ದರು.