ಗೋವಧೆ ಸಂರಕ್ಷಣಾ ಕಾಯ್ದೆ ರೈತರಿಗೆ ಮಾರಕ

KannadaprabhaNewsNetwork |  
Published : May 28, 2026, 01:45 AM IST
26ಎಚ್ಎಸ್ಎನ್16:  | Kannada Prabha

ಸಾರಾಂಶ

ಪ್ರತಿಭಟನೆಯಲ್ಲಿ ಕೆ.ಪಿ.ಆರ್‌.ಎಸ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಆರ್‌. ನವೀನ್ ಕುಮಾರ್ ಮಾತನಾಡಿ, ಕೃಷಿ ಕ್ಷೇತ್ರ ತೀವ್ರ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ರೈತರು ಹೈನುಗಾರಿಕೆ ಮೂಲಕ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಜಾನುವಾರು ವಧೆ ಹಾಗೂ ಮಾರಾಟ ನಿಷೇಧ ಕಾಯ್ದೆ ರೈತರ ಬದುಕನ್ನೇ ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದರು. ಹಾಲು ಉತ್ಪಾದನೆಗಾಗಿ ಸಾಕುವ ಜರ್ಸಿ ಹಸುಗಳು ವಯಸ್ಸಾದ ಬಳಿಕ ಅಥವಾ ಗಂಡು ಕರುಗಳಿಗೆ ಜನ್ಮ ನೀಡಿದ ಸಂದರ್ಭಗಳಲ್ಲಿ ಅವುಗಳನ್ನು ಸಾಕುವುದು ರೈತರಿಗೆ ಆರ್ಥಿಕವಾಗಿ ದೊಡ್ಡ ಹೊರೆಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ರೈತರು ಅನುಪಯುಕ್ತ ರಾಸುಗಳನ್ನು ಮಾರಾಟ ಮಾಡಿ ಸ್ವಲ್ಪ ಆದಾಯ ಗಳಿಸುತ್ತಿದ್ದರು. ಆದರೆ ಹೊಸ ಕಾಯ್ದೆಯಿಂದ ರೈತರಿಗೆ ತಮ್ಮ ಜಾನುವಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯದಲ್ಲಿ ಜಾರಿಯಲ್ಲಿರುವ ಕರ್ನಾಟಕ ಜಾನುವಾರು ವಧೆ ಹಾಗೂ ಜಾನುವಾರುಗಳ ಸಂರಕ್ಷಣಾ ಕಾಯ್ದೆ-೨೦೨೦ ರೈತ ವಿರೋಧಿಯಾಗಿದ್ದು, ರೈತ ಸಮುದಾಯದ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಕಾಯ್ದೆಯನ್ನು ತಕ್ಷಣ ವಾಪಸ್ ಪಡೆದು ರೈತರು ತಮ್ಮ ಜಾನುವಾರುಗಳನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ (ಕೆಆರ್‌ಆರ್‌ಎಸ್), ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಗೂ ಹಾಸನ ಜಿಲ್ಲಾ ದಲಿತ ಮತ್ತು ಜನಪರ ಚಳವಳಿಗಳ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕೆ.ಪಿ.ಆರ್‌.ಎಸ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಆರ್‌. ನವೀನ್ ಕುಮಾರ್ ಮಾತನಾಡಿ, ಕೃಷಿ ಕ್ಷೇತ್ರ ತೀವ್ರ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ರೈತರು ಹೈನುಗಾರಿಕೆ ಮೂಲಕ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಜಾನುವಾರು ವಧೆ ಹಾಗೂ ಮಾರಾಟ ನಿಷೇಧ ಕಾಯ್ದೆ ರೈತರ ಬದುಕನ್ನೇ ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದರು. ಹಾಲು ಉತ್ಪಾದನೆಗಾಗಿ ಸಾಕುವ ಜರ್ಸಿ ಹಸುಗಳು ವಯಸ್ಸಾದ ಬಳಿಕ ಅಥವಾ ಗಂಡು ಕರುಗಳಿಗೆ ಜನ್ಮ ನೀಡಿದ ಸಂದರ್ಭಗಳಲ್ಲಿ ಅವುಗಳನ್ನು ಸಾಕುವುದು ರೈತರಿಗೆ ಆರ್ಥಿಕವಾಗಿ ದೊಡ್ಡ ಹೊರೆಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ರೈತರು ಅನುಪಯುಕ್ತ ರಾಸುಗಳನ್ನು ಮಾರಾಟ ಮಾಡಿ ಸ್ವಲ್ಪ ಆದಾಯ ಗಳಿಸುತ್ತಿದ್ದರು. ಆದರೆ ಹೊಸ ಕಾಯ್ದೆಯಿಂದ ರೈತರಿಗೆ ತಮ್ಮ ಜಾನುವಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಈ ಕಾಯ್ದೆಯನ್ನು ಕೆಲವು ಸಂಘಟನೆಗಳು ದುರುಪಯೋಗಪಡಿಸಿಕೊಂಡು ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುವುದು, ನೈತಿಕ ಪೊಲೀಸ್‌ಗಿರಿ ತೋರಿಸುವುದು ಹಾಗೂ ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು. ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಧರ್ಮ ಪಾಲಿಸುವ ಹಾಗೂ ತಾನು ಬಯಸಿದ ಆಹಾರ ಸೇವಿಸುವ ಹಕ್ಕನ್ನು ನೀಡಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಆಹಾರದ ಹಕ್ಕಿನ ಮೇಲೆಯೇ ದಾಳಿ ನಡೆಯುತ್ತಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನೀಡಿರುವ ಸೂಚನೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕುರ್ಬಾನಿಗೆ ಗೋವುಗಳನ್ನು ಬಳಸಬಾರದು ಎಂಬ ಸೂಚನೆ ಒಂದು ಸಮುದಾಯದ ಧಾರ್ಮಿಕ ಆಚರಣೆ ಹಾಗೂ ಆಹಾರದ ಹಕ್ಕಿನ ಮೇಲಿನ ಹಸ್ತಕ್ಷೇಪವಾಗಿದೆ. ಇದರಿಂದ ನೇರವಾಗಿ ರೈತ ಸಮುದಾಯಕ್ಕೂ ಹಾನಿಯಾಗುತ್ತಿದೆ ಎಂದರು. ಜಿಲ್ಲಾಡಳಿತ ರೈತರು ತಮ್ಮ ಜಾನುವಾರುಗಳನ್ನು ಕಾನೂನುಬದ್ಧವಾಗಿ ಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಧರ್ಮದ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಂಘಟನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಆನೇಕೆರೆ, ಜಿಲ್ಲಾಧ್ಯಕ್ಷ ಬಾಬು, ಸಂಘದ ಜಿಲ್ಲಾಧ್ಯಕ್ಷ ಎಚ್. ಎಸ್. ಮಂಜುನಾಥ್, ಕುಮಾರ್, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಹಿರಿಯ ದಲಿತ ಮುಖಂಡ ರಾಜಶೇಖರ್ ಹುಲಿಕಲ್, ಅನ್ಸರ್‌, ಅರವಿಂದ್, ರಮೇಶ್ ವಿವಿಧ ಸಂಘಟನೆಗಳ ಮುಖಂಡರು ಮತ್ತು ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತೈಲ, ಗೊಬ್ಬರ, ಬಿತ್ತನೆ ಬೀಜ ಬೆಲೆ ಏರಿಕೆಗೆ ರೈತರ ಆಕ್ರೋಶ
ಅರಣ್ಯ ಇಲಾಖೆ ಜಾಗದಲ್ಲಿರುವ ಶಾಲೆಗಳ ಬಗ್ಗೆ ಮಾಹಿತಿ ನೀಡಲು ತಾಪಂ ಆಡಳಿತಾಧಿಕಾರಿ ಸೂಚನೆ