ಕಾರಹುಣ್ಣಿಮೆ ಕರಿಯ ದಿನ ಗೋಹತ್ಯೆ; ಹೆದ್ದಾರಿ ತಡೆದು ಆಕ್ರೋಶ

KannadaprabhaNewsNetwork |  
Published : Jul 02, 2026, 03:00 AM IST
ವಿಜಯಪುರ-ಅಕ್ಕಲಕೋಟ ರಾಷ್ಟ್ರೀಯ ಹೆದ್ದಾರಿ ಮೇಲೆ ಮಳ್ಳುಕಂಟಿ ಹಾಕಿ ರಸ್ತೆ ತಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಕಾರಹುಣ್ಣಿಮೆಯ (ಕರಿಯ) ದಿನದಂದು ಗೋಹತ್ಯೆ ಮಾಡಿದ ಘಟನೆ ಖಂಡಿಸಿ ಗ್ರಾಮಸ್ಥರು, ರೈತಪರ ಸಂಘಟನೆಗಳ ಸದಸ್ಯರು ವಿಜಯಪುರ-ಅಕ್ಕಲಕೋಟ ರಾಷ್ಟ್ರೀಯ ಹೆದ್ದಾರಿ ಮೇಲೆ ಮಳ್ಳುಕಂಟಿಗಳನ್ನು ಹಾಕಿ ರಸ್ತೆ ತಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಕಾರಹುಣ್ಣಿಮೆಯ (ಕರಿಯ) ದಿನದಂದು ಗೋಹತ್ಯೆ ಮಾಡಿದ ಘಟನೆ ಖಂಡಿಸಿ ಗ್ರಾಮಸ್ಥರು, ರೈತಪರ ಸಂಘಟನೆಗಳ ಸದಸ್ಯರು ವಿಜಯಪುರ-ಅಕ್ಕಲಕೋಟ ರಾಷ್ಟ್ರೀಯ ಹೆದ್ದಾರಿ ಮೇಲೆ ಮಳ್ಳುಕಂಟಿಗಳನ್ನು ಹಾಕಿ ರಸ್ತೆ ತಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರು ನಾರಾಯಣಪುರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿ ಬಂಧನದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.

ನಡೆದಿದ್ದೇನು?:

ರೈತರ ಪವಿತ್ರ ಹಬ್ಬವಾದ ಕಾರಹುಣ್ಣಿಮೆ ದಿನ ಹಿರೇಬೇವನೂರ ಗ್ರಾಮದಲ್ಲಿ ಗೋ ಹತ್ಯೆ ನಡೆಸಲಾಗಿದೆ ಎಂಬ ಸುದ್ದಿ ಹರಡಿ ಹಿರೇಬೇವನೂರ ಗ್ರಾಮಸ್ಥರು, ರೈತರು ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ರಸ್ತೆಗಿಳಿದರು. ಹಿರೇಬೇವನೂರ ಬಳಿ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಆರಂಭಿಸಿದರು. ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ರಸ್ತೆಯ ಮಧ್ಯ ಟೈರ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐ ಸುನೀಲ ಪಾಟೀಲ ಹೆಚ್ಚುವರಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು. ಆರೋಪಿಗಳನ್ನು ಬಂಧಿಸುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಧರಣಿನಿರತರು ಪಟ್ಟು ಹಿಡಿದರು. ಪೊಲೀಸರು ತನಿಖೆ ಚುರುಕುಗೊಳಿಸಿ ಕೃತ್ಯ ಎಸಗಿದ ಪ್ರಮುಖ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದು, ರಹಸ್ಯವಾಗಿ ಪೊಲೀಸ್ ಠಾಣೆಗೆ ಕರೆದೊಯ್ದರು. ಆರೋಪಿಯನ್ನು ವಶಕ್ಕೆ ಪಡೆದಿರುವ ಕುರಿತು ಪೊಲೀಸರು ಅಧಿಕೃತ ಮಾಹಿತಿ ನೀಡಿದ ಬಳಿಕ, ಗ್ರಾಮಸ್ಥರು ಸುದೀರ್ಘ ಹೆದ್ದಾರಿ ತಡೆ ಪ್ರತಿಭಟನೆ ಕೈಬಿಟ್ಟಿದ್ದಾರೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಚಾರ ವ್ಯತ್ಯಯ: ಸವಾರರ ಪರದಾಟ: ಹೆದ್ದಾರಿ ಸಂಪೂರ್ಣ ಬಂದ್ ಆದ ಹಿನ್ನೆಲೆಯಲ್ಲಿ ನೂರಾರು ವಾಹನಗಳು ರಸ್ತೆಯಲ್ಲೇ ಸಿಲುಕಿಕೊಂಡವು. ಸಾರಿಗೆ ಮತ್ತು ಸರಕು ಸಾಗಣೆ ಸಂಪೂರ್ಣವಾಗಿ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.

ಹಿರೇಬೇವನೂರ ಗ್ರಾಮದಲ್ಲಿ ಗೋಹತ್ಯೆ ನಡೆದಿದೆ ಎಂದು ಹೆದ್ದಾರಿ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿ ಒಬ್ಬ ಆರೋಪಿಯನ್ನು ಠಾಣೆಗೆ ತಂದಿದ್ದೇವೆ. ಆರೋಪಿಯೊಂದಿಗೆ ಇನ್ನೂ ಯಾರ‍್ಯಾರಿದ್ದಾರೆ ಎಂದು ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ.

-ಸುನೀಲ ಪಾಟೀಲ ಸಿಪಿಐ ಇಂಡಿ ಪೊಲೀಸ್‌ ಠಾಣೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೈಜ ದೇವರ ಕೆಲಸ ಮಾಡುತ್ತಿರುವ ಕ್ರೆಡಿಟ್‌ ಆಕ್ಸೆಸ್ ಇಂಡಿಯಾ ಫೌಂಡೇಶನ್‌
ಆ್ಯಂಬುಲೆನ್ಸ್ ಸೇವೆಗೆ ಎಸ್.ಆರ್.ಪಾಟೀಲ ಚಾಲನೆ