ಕನ್ನಡಪ್ರಭ ವಾರ್ತೆ ಬೆಳಗಾವಿ
ಉದ್ಯಮಬಾಗ ಠಾಣೆಯ ಸಿಪಿಐ ಧರೇಗೌಡ ಪಾಟೀಲ್ ವಿರುದ್ಧ ಅದೇ ಠಾಣೆಯಲ್ಲಿ ಕಾನ್ಸ್ಟೇಬಲ್ ವಿಠ್ಠಲ್ ಮುನ್ಯಾಳ ಆತ್ಮಹತ್ಯೆಗೆ ಮುಂದಾಗಿದ್ದರು. ವಿಠ್ಠಲ್ ಅವರು ಬರೆದಿರುವ ಕೈ ಬರಹದಲ್ಲಿ ಹಫ್ತಾ ವಸೂಲಿ ಮಾಡಿಕೊಡುವ ಸಿಬ್ಬಂದಿಗೆ ರಾತ್ರಿ ಕರ್ತವ್ಯಕ್ಕೆ ಹಾಕಲ್ಲ. ರಜೆ ವಿಚಾರದಲ್ಲಿ ಸಿಪಿಐ ಧರೇಗೌಡ ಸಾಕಷ್ಟು ಕಿರುಕುಳ ಕೊಡುತ್ತಿದ್ದಾರೆ. ರಜೆ ಪಡೆದು ಹಿಂದಿರುಗಿದಾಗ ಅವಾಚ್ಯವಾಗಿ ನಿಂದಿಸುತ್ತಾರೆ. ಸೋದರಿ ಮದುವೆಗೆ ರಜೆ ಪಡೆದಿದ್ದಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಕರ್ತವ್ಯದಲ್ಲಿದ್ರೂ ಗೈರು ಅಂತಾ ಹೇಳಿ ಮೆಮೋ ಜಾರಿ ಮಾಡುತ್ತಾರೆ ಎಂದು ಐದು ಪುಟಗಳಲ್ಲಿ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.
ಪೇದೆ ವಿಠ್ಠಲ್ ಮುನ್ಯಾಳ ಹೆಸರಿನಲ್ಲಿ ಸಹಿ ಇರುವ ಐದು ಪುಟಗಳ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಐದು ಪುಟಗಳ ಕೈ ಬರಹದ ಪತ್ರದ ಜೊತೆ ಕರ್ತವ್ಯ ಸರದಿ ಪುಸ್ತಕ ಪ್ರತಿ, ವಿವಿಧ ಆದೇಶ ಪ್ರತಿಗಳನ್ನು ಲಗತ್ತಿಸಲಾದ ಪಿಡಿಎಫ್ ಫೈಲ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಮಾತ್ರವಲ್ಲ, ಈ ಪ್ರತಿಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರ ಜೊತೆಗೆ ಡಿಜಿ-ಐಜಿಪಿ,, ಖಡೇಬಜಾರ್ ಎಸಿಪಿ, ಗೃಹಮಂತ್ರಿ ಡಾ. ಜಿ. ಪರಮೇಶ್ವರ ಕಚೇರಿ, ಮಾನವಹಕ್ಕುಗಳ ಆಯೋಗ, ಪೊಲೀಸ್ ದೂರುಗಳ ಪ್ರಾಧಿಕಾರ ಎಸ್‌ಸಿಎಸ್‌ಟಿ ಪ್ರಾಧಿಕಾರ ಘಟಕದ ಹೆಸರಿಗೂ ಪ್ರತಿ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.ಪತ್ರದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೇದೆ ವಿಠ್ಠಲ ಮುನ್ಯಾಳರನ್ನು ಪತ್ತೆ ಹಚ್ಚಿ ಮನವೊಲಿಸಿ ಗೌಪ್ಯ ಸ್ಥಳದಲ್ಲಿರಿಸಿ ಕೌನ್ಸೆಲಿಂಗ್ ಮಾಡಲಾಗುತ್ತಿದೆ ಎನ್ನಲಾಗಿದೆ.