ಕನ್ನಡಪ್ರಭ ವಾರ್ತೆ ಬೆಳಗಾವಿ
ಮೋದಗಾ ಗ್ರಾಮದ ನಿವಾಸಿ ಪುಂಡಲಿಕ ಜೋತೆಪ್ಪ ಲೋಹಾರ್ ಅವರು ಕಳೆದ ಹಲವು ವರ್ಷಗಳಿಂದ ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಕುಟುಂಬ ಪರಿಸ್ಥಿತಿಯೂ ಸಂಕೀರ್ಣವಾಗಿದೆ. ನಾಲ್ವರು ಮಕ್ಕಳಿದ್ದರೂ ಒಬ್ಬ ಮಗ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಮೂವರು ಹೆಣ್ಣುಮಕ್ಕಳು ಮಹಾರಾಷ್ಟ್ರದಲ್ಲಿ ನೆಲೆಸಿದ್ದು, ಪತ್ನಿಯೂ ವೈವಾಹಿಕ ಸಮಸ್ಯೆಯಿಂದ ದೂರವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವೃದ್ಧನ ಜೀವನ ಸಂಕಷ್ಟಕ್ಕೆ ಸಿಲುಕಿತ್ತು. ಇದರ ನಡುವೆ ಆಧಾರ್ ಕಾರ್ಡ್ ಅಪ್‌ಡೇಟ್ ಆಗದ ಕಾರಣಕ್ಕೆ ಕಳೆದ ಐದು ವರ್ಷಗಳಿಂದ ವೃದ್ಧಾಪ್ಯ ವೇತನ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ವೃದ್ಧನಿಗೆ ದಿನನಿತ್ಯದ ಜೀವನ ನಡೆಸಲು ಸಹ ತೊಂದರೆಯಾಗಿತ್ತು. ಈ ದುಸ್ಥಿತಿಯನ್ನು ಗಮನಿಸಿದ ಯಮಕನಮರಡಿ ಠಾಣೆಯ ಸಿಪಿಐ ಜಾವೀದ್ ಮುಶಾಪುರೆ ಹಾಗೂ ಅವರ ಪೊಲೀಸ್ ಸಿಬ್ಬಂದಿ ಆಸರೆ ಮನೋಭಾವದೊಂದಿಗೆ ವೃದ್ಧನ ಮನೆಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದರು.
ನಂತರ, ತಕ್ಷಣ ಕ್ರಮ ಕೈಗೊಂಡ ಸಿಪಿಐ ತಹಶೀಲ್ದಾರರ ಕಚೇರಿಯೊಂದಿಗೆ ಸಂವಹನ ನಡೆಸಿ ಅಗತ್ಯ ದಾಖಲೆಗಳನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾದರು. ಅವರ ವಿಶೇಷ ಆಸಕ್ತಿ ಮತ್ತು ಪರಿಶ್ರಮದ ಫಲವಾಗಿ, ಏಪ್ರಿಲ್ 2026ರಿಂದ ವೃದ್ಧ ಪುಂಡಲಿಕ ಅವರಿಗೆ ವೃದ್ಧಾಪ್ಯ ವೇತನ ಮರು ಪ್ರಾರಂಭವಾಗಿದೆ.ಸಿಪಿಐ ಜಾವೀದ್ ಮುಶಾಪುರೆ ಅವರ ಈ ಮಾನವೀಯ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಸಮಾಜದಲ್ಲಿ ಪೊಲೀಸರ ಮೇಲಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ. ಸಂಕಷ್ಟದಲ್ಲಿರುವವರ ಬೆನ್ನಿಗೆ ನಿಲ್ಲುವ ಇಂತಹ ಉದಾಹರಣೆಗಳು ಇನ್ನಷ್ಟು ಮಾನವೀಯ ಸೇವೆಗಳಿಗೆ ಪ್ರೇರಣೆ ನೀಡುವಂತಿವೆ.------