ಬಳ್ಳಾರಿ: ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ನಾರಾ ಪ್ರತಾಪ ರೆಡ್ಡಿ ಅವರನ್ನು ಸಿಪಿಐಎಂ ಬೆಂಬಲಿಸಲಿದ್ದು, ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದೆ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಎಸ್.ವೈ. ಗುರುಶಾಂತ್ ಹೇಳಿದರು.
ಪ್ರತಾಪ ರೆಡ್ಡಿ ಅವರ ರಾಜಕೀಯ ಹೋರಾಟದ ಜತೆಗೆ ಸಾಮಾಜಿಕ ಸಮಸ್ಯೆಗಳಿಗೆ ಈ ಹಿಂದಿನಿಂದಲೂ ಸ್ಪಂದಿಸಿರುವುದು ಮತ್ತು ಜನಪರ ಚಳವಳಿಗಳನ್ನು ಬೆಂಬಲಿಸುತ್ತಾ ಬಂದಿರುವುದನ್ನು ಪರಿಗಣಿಸಿ ಅವರನ್ನು ಬೆಂಬಲಿಸಿ, ಗೆಲುವಿಗೆ ಶ್ರಮಿಸಲು ಪಕ್ಷ ನಿರ್ಧರಿಸಿದೆ ಎಂದು ಎಸ್.ವೈ. ಗುರುಶಾಂತ್ ತಿಳಿಸಿದರು.
ನಾರಾ ಪ್ರತಾಪ ರೆಡ್ಡಿ ಮಾತನಾಡಿ, ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಈ ಹಿಂದಿನ ಸಲವೂ ಸ್ಪರ್ಧಿಸಿದ್ದೆ. ಆದರೆ, ಕೆಲವೇ ಮತಗಳ ಅಂತರದಲ್ಲಿ ಸೋಲಾಯಿತು. ಪ್ರಥಮ ಪ್ರಾಶಸ್ತ್ಯ ಮತಗಳು ನನಗೆ ಹೆಚ್ಚಾಗಿ ಬಂದಿದ್ದವು. ಕುಲಗೆಟ್ಟ ಮತಗಳಿಂದ ಪರಾಭವಗೊಳ್ಳಬೇಕಾಯಿತು. ಈ ಬಾರಿ ಆಮ್ ಆದ್ಮಿ ಪಕ್ಷ, ಸಿಪಿಐಎಂ ಸೇರಿದಂತೆ ಅನೇಕ ಜನಪರ ಸಂಘಟನೆಗಳು ಬೆಂಬಲಿಸಿದ್ದು, ಗೆಲುವಿಗೆ ಶ್ರಮಿಸುತ್ತಿವೆ ಎಂದರು.ವೆಬ್‌ಕ್ಯಾಮರಾ ಯಾಕೆ ಹಾಕಬೇಕಿತ್ತು?: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಸಿಸಿ ಕ್ಯಾಮೆರಾ ಜತೆ ವೆಬ್ ಕಾಸ್ಟಿಂಗ್ ಅಳವಡಿಸಲಾಗಿದೆ. ರಾಜ್ಯದಲ್ಲಿ ಎಲ್ಲೂ ಹಾಕದೇ ಈ ಭಾಗದಲ್ಲಿ ಮಾತ್ರ ಏಕೆ ಈ ವ್ಯವಸ್ಥೆ ಮಾಡಿದರು ಎಂದು ಪ್ರತಾಪ ರೆಡ್ಡಿ ಪ್ರಶ್ನಿಸಿದರು.
ಜೂ.15ರ ವೇಳೆಗೆ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿವಿಧ ಪಕ್ಷಗಳು ಬೆಂಬಲಿಸುವ ಜತೆಗೆ ಗೆಲುವಿಗೆ ಶ್ರಮಿಸುತ್ತಿರುವುದು ಮತ್ತಷ್ಟು ಖುಷಿ ತಂದಿದೆ ಎಂದರು.
ಸಿಪಿಐಎಂ ಪಕ್ಷದ ಜಿಲ್ಲಾ ಪ್ರಮುಖರಾದ ಜೆ. ಸತ್ಯಬಾಬು, ಚಂದ್ರಕುಮಾರಿ ಸುದ್ದಿಗೋಷ್ಠಿಯಲ್ಲಿದ್ದರು.