ಹಗರಿಬೊಮ್ಮನಹಳ್ಳಿ: ದೇಶದ ದುಡಿಯುವ ಜನತೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾಗ ಪೆಟ್ರೋಲ್, ಡೀಸೆಲ್, ಗ್ಯಾಸ್ ದರಗಳನ್ನು ನಿರಂತರವಾಗಿ ಏರಿಸುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಸಿಪಿಎಂ ತಾಲೂಕು ಕಾರ್ಯದರ್ಶಿ ಬಿ.ಮಾಳಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಐದು ರಾಜ್ಯಗಳ ಚುನಾವಣೆಯ ಮೊದಲು ಇಂಧನಗಳ ದಾಸ್ತಾನು ಕೊರತೆ ಇಲ್ಲ. ಕೊಲ್ಲಿ ಯುದ್ಧದಿಂದ ದೇಶದಲ್ಲಿ ತೈಲ ಬಿಕ್ಕಟ್ಟು ಉಂಟಾಗದು ಎಂದು ಹೇಳಿದ್ದ ದೇಶದ ಪ್ರಧಾನಿ, ಚುನಾವಣೆಗಳ ಫಲಿತಾಂಶದ ನಂತರ ಇಂಧನಗಳ ಬೆಲೆ ಏರಿಸಿ ವಿದೇಶಕ್ಕೆ ತೆರಳಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಿಡಿಕಾರಿದರು.
ಕೊಲ್ಲಿ ಯುದ್ಧದ ವೇಳೆಯಲ್ಲಿ ದೇಶದ ಇಂಧನ ಬಿಕ್ಕಟ್ಟಿಗೆ ಅಭಿವೃದ್ಧಿಗೆ ಪೂರಕವಾಗದ ಭಾರತದ ವಿದೇಶಾಂಗ ನೀತಿಯೇ ಕಾರಣವಾಗಿದೆ. ಪ್ರಧಾನಿಯವರ ವಿದೇಶಾಂಗ ನೀತಿಯನ್ನು ಪಕ್ಷ ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.ವಿಶ್ವದ ಬಹುತೇಕ ರಾಷ್ಟ್ರಗಳು ತಮ್ಮ ತಮ್ಮ ದೇಶದ ಜನರ ಹಿತಾಸಕ್ತಿಗೆ ಪೂರಕವಾಗಿ ತೈಲ ಬೆಲೆಗಳನ್ನು ನಿಯಂತ್ರಿಸುತ್ತಿದ್ದರೆ, ನಮ್ಮ ದೇಶದಲ್ಲಿ ಮಾತ್ರ ಕೇಂದ್ರದ ವಿಫಲ ವಿದೇಶಾಂಗ ನೀತಿಯಿಂದಾಗಿ ತೈಲ ಬೆಲೆಗಳ ಏರಿಕೆ ಜನತೆಯ ಮೇಲೆ ಹೊರೆಯಾಗಿದೆ ಎಂದು ಪಕ್ಷದ ಜಿಲ್ಲಾ ಮುಖಂಡ ಆರ್.ಎಸ್.ಬಸವರಾಜ್ ಆರೋಪಿಸಿದರು. ಇಂಧನ ಬೆಲೆಗಳನ್ನು ಇಳಿಸುವ ಜೊತೆಗೆ ಬೆಲೆಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ತಾಲೂಕು ಮುಖಂಡ ಜಗನ್ನಾಥ್ ಒತ್ತಾಯಿಸಿದರು.
ಹಗರಿಬೊಮ್ಮನಹಳ್ಳಿಯ ಬಸವೇಶ್ವರ ವೃತ್ತದಲ್ಲಿ ಇಂಧನಗಳ ದರ ಏರಿಕೆ ವಿರೋಧಿಸಿ ಸಿಪಿಎಂ ತಾಲೂಕು ಘಟಕದ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.