ಚನ್ನಪಟ್ಟಣ: ಯೋಗೇಶ್ವರ್ ಅವರನ್ನು ನೀವು ಎರಡು ಬಾರಿ ಸೋಲಿಸಿದ್ದೀರಾ. ಈ ಬಾರಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಈ ಬಾರಿ ನೀವು ಅವರಿಗೆ ವಿಷ ಹಾಕಲ್ಲ, ಹಾಲು ಹಾಕುತ್ತೀರಾ ಎಂದು ನಂಬಿ ನಿಮ್ಮ ಬಳಿ ಬಂದಿದ್ದಾರೆ. ಹಾಲು ಜೇನು ಎರಡು ಸೇರಿಸಿ ಹೆಚ್ಚಿನ ಮತಗಳಿಂದ ಅವರನ್ನು ಗೆಲ್ಲಿಸಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರ ನಡೆಸಿದ ಅವರು, ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಸ್ತದ ಗುರುತಿನಲ್ಲಿ ಸಿ.ಪಿ ಯೋಗೇಶ್ವರ್ ನಿಂತಿದ್ದಾರೆ. ನಿಮ್ಮನ್ನ ನಂಬಿ ಚುನಾವಣೆಗೆ ನಿಂತಿದ್ದಾರೆ. ಅವರನ್ನು ಗೆಲ್ಲಿಸುವುದು ನಿಮ್ಮ ಜವಾಬ್ದಾರಿ ಎಂದರು. ತಾಲೂಕಿನಲ್ಲಿ ಕಾಂಗ್ರೆಸ್ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕಂಡು ಯೋಗೇಶ್ವರ್ ಕಾಂಗ್ರೆಸ್‌ಗೆ ಮರಳಿ ಬಂದಿದ್ದಾರೆ. ತಾಲೂಕಲ್ಲಿ ಇನ್ನಷ್ಟು ಕೆಲಸ ಆಗಬೇಕು ಅಂತ ಕಾಂಗ್ರೆಸ್ ಸೇರಿದ್ದಾರೆ. ನಾವು ಅವರು ಸೇರಿ ಕೆರೆ ತುಂಬಿಸುವ ಕೆಲಸ ಮಾಡಿದ್ವಿ. ಮುಂದೆ ಇನ್ನು ಹೆಚ್ಚಿನ ಅಭಿವೃದ್ಧಿ ಮಾಡುತ್ತೇವೆ. ಈ ಹಿಂದೆ ಎರಡು ಬಾರಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದಿರಿ, ಆದರೆ, ಅವರು ಈಗ ಮಂಡ್ಯಕ್ಕೆ ಹೊರಟೋದರು. ಯೋಗೇಶ್ವರ್ ಎರಡು ಬಾರಿ ಸೋತಿದ್ದಾರೆ. ಈ ಬಾರಿ ಯೋಗಿಯನ್ನು ಗೆಲ್ಲಿಸಿಕೊಡಿ ಎಂದರು.ಪಂಪ್ ಸೆಟ್, ಎರಡು ಸಾವಿರ, ಮನೆಗೆ ಕರೆಂಟ್ ಪ್ರೀ, ಉಚಿತ ಪ್ರಯಾಣ ಮಾಡಿಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿ ಐದು ಗ್ಯಾರಂಟಿಗಳನ್ನು ಜಾರಿಗೆ ತಂದರು. ಇಂತಹ ಯೋಜನೆಗಳನ್ನು ಬಿಜೆಪಿಯವರು ನೀಡಿದ್ದರಾ? ಅದು ಮುಂದುವರೆಬೇಕು ಅಂದ್ರೆ ನಮಗೆ ಶಕ್ತಿ ತುಂಬಬೇಕು ಎಂದರು. ಪೊಟೋ೨೯ಸಿಪಿಟಿ೫:
ಚನ್ನಪಟ್ಟಣ ತಾಲೂಕಿನ ನಾಗವಾರ ಗ್ರಾಮದಲ್ಲಿ ಯೋಗೇಶ್ವರ್ ಪರ ಸುರೇಶ್ ಪ್ರಚಾರ ನಡೆಸಿದರು.