ರಾಂ ಅಜೆಕಾರು
ಕಾರ್ಕಳ : ಕರ್ನಾಟಕದ ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿ, ಭಾರತದ ಏಕೈಕ ನೈಜ ಮರವಾಸಿ ಸಿಹಿನೀರಿನ ಏಡಿ ‘ಕನಿ ಮರನಂಡು’ (Kani Maranjandu) ಮೊದಲ ಬಾರಿಗೆ ಆಗುಂಬೆಯಲ್ಲಿ ದಾಖಲಾಗಿದೆ.
ಇದುವರೆಗೆ ಕೇವಲ ಕೇರಳದ ಆಗಸ್ತ್ಯಮಲೆ ಜೈವಿಕ ವಲಯದಲ್ಲಷ್ಟೇ ದಾಖಲಾಗಿದ್ದ ಈ ಪ್ರಭೇದವು, ಹೊಸ ದಾಖಲೆಯೊಂದಿಗೆ ಸುಮಾರು 566 ಕಿ.ಮೀ. ದೂರ ಕರ್ನಾಟಕದಲ್ಲಿ ಸಂಶೋಧನೆಯಿಂದ ದೃಢಪಟ್ಟಿದೆ.
ಜೋಯೆಲ್ ಕೊರೆಯ , ಪವನ್ ಚಿಕ್ಕನಾರಾಯಣಸ್ವಾಮಿ ಹಾಗೂ ವಿಜಯ್ ಕುಮಾರ್ ನಡೆಸಿದ ಅಧ್ಯಯನದಲ್ಲಿ ಮರವಾಸಿ ಏಡಿ ಪತ್ತೆ ಮಾಡಿದ್ದಾರೆ.
‘ಗೆಕಾರ್ಸಿನುಸಿಡೆ ಕುಟುಂಬದ ಅಪರೂಪದ ಸಿಹಿನೀರಿನ ಮರವಾಸಿ ಏಡಿ’ ಭಾರತದಲ್ಲಿ ಸಂಪೂರ್ಣವಾಗಿ ಮರಗಳಲ್ಲೇ ವಾಸಿಸುವ ಏಕೈಕ ನೈಜ ಮರವಾಸಿ ಸಿಹಿನೀರಿನ ಏಡಿ ಎಂಬ ವಿಶೇಷತೆ ಹೊಂದಿದೆ.
ಸಂಶೋಧಕರ ಪ್ರಕಾರ, ಈ ಅಪರೂಪದ ಮರವಾಸಿ ಏಡಿ ಮೊದಲ ಬಾರಿಗೆ 2023ರಲ್ಲಿ ಆಗುಂಬೆಯ ಸದಾ ಹಸಿರು ಮಳೆಕಾಡಿನಲ್ಲಿ ನೆಲದ ಮೇಲೆ ಸಂಚರಿಸುತ್ತಿರುವಾಗ ದಾಖಲಾಗಿತ್ತು. ಬಳಿಕ 2025ರಲ್ಲಿ ಇದೇ ಪ್ರಭೇದದ ಮತ್ತೊಂದು ಏಡಿ ಮರದ ನೀರು ತುಂಬಿದ ಕುಳಿಯಲ್ಲಿ ಪತ್ತೆಯಾಗಿ, ಛಾಯಾಚಿತ್ರಗಳ ಆಧಾರದ ಮೇಲೆ ಗುರುತಿಸಿ ದಾಖಲಿಸಲಾಯಿತು.
ಈ ಏಡಿಯ ಉದ್ದವಾದ ಕಾಲುಗಳು, ಅಂಡಾಕಾರದ ಕವಚ, ಹಳದಿ-ಕಿತ್ತಳೆ ಬಣ್ಣದ ಕೊಕ್ಕುಗಳು ಹಾಗೂ ನೀಲಿಕಪ್ಪು ದೇಹವು ಪ್ರಮುಖ ಗುರುತಿಸುವ ಲಕ್ಷಣಗಳಾಗಿವೆ. ಎರಡನೇ ಅವಲೋಕನದಲ್ಲಿ ಕಂಡ ಏಡಿಯು ಗಂಡು ಎಂದು ಸಂಶೋಧಕರು ಗುರುತಿಸಿದ್ದಾರೆ.
ಇದುವರೆಗೆ ಈ ಪ್ರಭೇದ ಸಂಪೂರ್ಣವಾಗಿ ಮರವಾಸಿಯೆಂದು ಪರಿಗಣಿಸಲಾಗಿತ್ತು. ಆದರೆ ಆಗುಂಬೆಯಲ್ಲಿ ನೆಲದ ಮೇಲೂ ಸಂಚರಿಸುತ್ತಿರುವುದು ದಾಖಲಾಗಿರುವುದು, ಇದರ ಪರಿಸರಶಾಸ್ತ್ರದ ಕುರಿತು ಹೊಸ ಕುತೂಹಲಕಾರಿ ಪ್ರಶ್ನೆಗಳನ್ನು ಎತ್ತಿದೆ. ಸಂಗಾತಿಯನ್ನು ಹುಡುಕುವುದು ಅಥವಾ ಹೊಸ ವಾಸಸ್ಥಳವನ್ನು ಅನ್ವೇಷಿಸುವ ಉದ್ದೇಶದಿಂದ ಇದು ನೆಲಕ್ಕಿಳಿಯುವ ಸಾಧ್ಯತೆ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ಮಳೆಗಾಲದಲ್ಲಿ ಈ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಸಂಶೋಧನೆಯ ಪ್ರಕಾರ, ಈ ಏಡಿಯು ನಿತ್ಯಹರಿದ್ವರ್ಣ ಹಾಗೂ ಅರೆ ನಿತ್ಯಹರಿದ್ವರ್ಣ ಕಾಡಿನ ಮರಗಳ ಕಾಂಡದಲ್ಲಿರುವ ನೀರು ತುಂಬಿದ ಕುಳಿಗಳಲ್ಲಿ ವಾಸಿಸುತ್ತದೆ. ಎಲೆಗಳು, ಬೀಜಗಳು, ಕೀಟಗಳು ಹಾಗೂ ಸ್ಲಗ್‌ಗಳು ಇದರ ಪ್ರಮುಖ ಆಹಾರವಾಗಿವೆ. ಆಗುಂಬೆಯಲ್ಲಿ ಇದು ಮೈರಿಸ್ಟಿಕಾ ಜೌಗು ಪ್ರದೇಶ ಸಮೀಪ ಕಂಡುಬಂದಿರುವುದು, ನೀರಿನ ಮೂಲಗಳ ಸಮೀಪದ ಪರಿಸರವನ್ನು ಇದು ಹೆಚ್ಚಾಗಿ ಇಷ್ಟಪಡುತ್ತದೆ.
ಈ ಹೊಸ ದಾಖಲೆಯು ಪಶ್ಚಿಮ ಘಟ್ಟದ ಜೀವವೈವಿಧ್ಯದ ಅಧ್ಯಯನಕ್ಕೆ ಮಹತ್ವದ ಕೊಡುಗೆಯಾಗಿದೆ. ಮರಗಳಲ್ಲಿ ಗುಪ್ತವಾಗಿ ವಾಸಿಸುವ ಸ್ವಭಾವದಿಂದಾಗಿ ಈ ಅಪರೂಪದ ಏಡಿ ಇದುವರೆಗೆ ಗಮನಕ್ಕೆ ಬಂದಿರದ ಸಾಧ್ಯತೆ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದು, ಪಶ್ಚಿಮ ಘಟ್ಟದಾದ್ಯಂತ ಸಮಗ್ರ ಸಮೀಕ್ಷೆ ನಡೆಸಿ ಇದರ ವಿತರಣಾ ಪ್ರದೇಶ, ಪರಿಸರಶಾಸ್ತ್ರ, ವರ್ತನೆ ಹಾಗೂ ಸಂರಕ್ಷಣಾ ಸ್ಥಿತಿಯ ಕುರಿತು ಹೆಚ್ಚಿನ ವೈಜ್ಞಾನಿಕ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಶಿಫಾರಸು ಮಾಡಿದ್ದಾರೆ.
ಮರದಿಂದ ಮರಕ್ಕೆ ಚಲಿಸುವುದು ಸಂಗಾತಿ ಹುಡುಕುವಿಕೆ ಅಥವಾ ಹೊಸ ಆವಾಸಕ್ಕೆ ಸ್ಥಳಾಂತರಗೊಳ್ಳುವ ವರ್ತನೆಯ ಭಾಗವಾಗಿರಬಹುದು. ಇದಕ್ಕೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ.ಅರಣ್ಯ ನಾಶ, ಹಳೆಯ ಮರಗಳ ಕಡಿತ ಹಾಗೂ ಹವಾಮಾನ ಬದಲಾವಣೆಯಿಂದ ಮರಗಳಲ್ಲಿನ ನೀರಿನ ಕುಳಿಗಳು ಹಾನಿಗೊಳಗಾದರೆ, ಈ ಅಪರೂಪದ ಏಡಿಯ ಉಳಿವಿಗೆ ಗಂಭೀರ ಅಪಾಯ ಉಂಟಾಗಬಹುದು.ರಾಜ್ಯಮಟ್ಟದ ಸಮೀಕ್ಷೆಗಳು, ಹಳೆಯ ಮರಗಳು ಮತ್ತು ಮಳೆಕಾಡುಗಳ ಸಂರಕ್ಷಣೆ, ಸ್ಥಳೀಯರಲ್ಲಿ ಜಾಗೃತಿ ಮೂಡಿಸುವುದು ಹಾಗೂ ನಾಗರಿಕ ವಿಜ್ಞಾನ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವುದು ಈ ಪ್ರಭೇದದ ದೀರ್ಘಕಾಲೀನ ಸಂರಕ್ಷಣೆಗೆ ಅಗತ್ಯವಾಗಿದೆ.
ಆಗುಂಬೆಯಲ್ಲಿ ಈ ಅಪರೂಪದ ಮರವಾಸಿ ಏಡಿ ಪತ್ತೆಯಾಗಿರುವುದು ಪಶ್ಚಿಮ ಘಟ್ಟದ ಜೀವವೈವಿಧ್ಯದ ಹೊಸ ಅಧ್ಯಾಯವಾಗಿದೆ. ಇದರ ವಿಸ್ತರಣೆ ಮತ್ತು ಪರಿಸರಶಾಸ್ತ್ರವನ್ನು ತಿಳಿಯಲು ಹೆಚ್ಚಿನ ಸಂಶೋಧನೆ ಅನಿವಾರ್ಯ.
-ಜೋಯೆಲ್ ಕೊರೆಯ, ಸಂಶೋಧಕರು, ಕನನ ಕನ್ಸರ್ವೇಶನ್ ಆಗುಂಬೆ