ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ವಿಭಾಗದ ಹಲವು ಕಡೆ ರಸ್ತೆ ಬದಿಯ ತಡೆಗೋಡೆ ಒಡೆದಿದ್ದು ತಡೆಗೋಡೆಗೆ ಆಧಾರವಾಗಿ ನಿರ್ಮಿಸಿಲಾದ ಹಿಂಬದಿ ಗೋಡೆಯೂ ಕುಸಿಯುವ ಭೀತಿ ಎದುರಾಗಿದೆ.
ತಡೆಗೋಡೆ ಪ್ರದೇಶದಲ್ಲಿ ಚರಂಡಿ ಇಲ್ಲದ ಕಾರಣ ಮಳೆ ನೀರು ಘಾಟಿಯ ರಸ್ತೆಯಲ್ಲಿ ಹರಿಯುತ್ತಿದ್ದು ತಡೆಗೋಡೆಗಳ ಸಮೀಪದಿಂದಲೇ ಕಣಿವೆ ಭಾಗಕ್ಕೆ ಇಳಿಯುತ್ತಿದೆ. ಹಿಂಬದಿ ಕಟ್ಟಿರುವ ಗೋಡೆ ಮೂಲಕ ಕಣಿವೆ ಪ್ರದೇಶಕ್ಕೆ ಹರಿದು ಗೋಡೆಯ ಮಣ್ಣು ಸವಕಳಿಗೊಳ್ಳುತ್ತಿದೆ. ಇಲ್ಲಿ ಕೆಲವೆಡೆ ಈಗಾಗಲೇ ಮರಳಿನ ಚೀಲ, ಟಾರ್ಪಾಲ್ ಹಾಕಿದ್ದರು ಅದು ಸಂಪೂರ್ಣ ತಡೆಯಾಗಲು ಸಾಧ್ಯವಿಲ್ಲ. ರಸ್ತೆಯಲ್ಲಿ ಬಿರುಕು: ಘಾಟಿಯ ಚಿಕ್ಕಮಗಳೂರು ವಿಭಾಗದ ಐದರಿಂದ ಆರು ಕಡೆಗಳಲ್ಲಿ ಘಾಟಿಯ ರಸ್ತೆ ಮಧ್ಯೆ ಬಿರುಕುಗಳು ಕಂಡು ಬಂದಿದೆ. ಇನ್ನೊಂದೆಡೆ ರಸ್ತೆ ಬಿರುಕುಗಳ ಮೂಲಕ ನೀರು ಇಳಿಯುತ್ತಿದೆ. ಇದು ಇನ್ನಷ್ಟು ಕುಸಿತಕ್ಕೆ ಕಾರಣವಾಗಬಹುದು. ಒಟ್ಟಿನಲ್ಲಿ ಘಾಟಿಯ ಚಿಕ್ಕಮಗಳೂರು ವಿಭಾಗದ ಹಲವೆಡೆ ಸಮಸ್ಯೆ ಕಂಡು ಬಂದಿದೆ.ಒಂದೆಡೆ ಘಾಟಿಯಲ್ಲಿ ಮಳೆ ಮತ್ತು ಮಂಜು ಮುಸುಕಿದ ವಾತಾವರಣವಿದ್ದು, ರಾತ್ರಿ ವೇಳೆ ಸಂಚರಿಸುವಾಗ ತೀರ ಎಚ್ಚರ ಅಗತ್ಯ. ಬಿರುಕು ಬಿಟ್ಟಿರುವ ತಡೆಗೋಡೆ ಒಡೆದಿರುವ ರಸ್ತೆ ಸ್ಥಳಗಳು ರಾತ್ರಿ ಗಮನಕ್ಕೆ ಬರಲು ಕಷ್ಟವಾಗುವುದರಿಂದ ಅಪಾಯಗಳು ಸಂಭವಿಸುವ ಸಾಧ್ಯತೆ ಇದೆ. ಘಾಟಿಯ ಜಲಪಾತ ತೊರೆ, ಹಳ್ಳಗಳು ತುಂಬಿ ಹರಿಯುತ್ತಿದ್ದು ಘಾಟಿಯ ಸಂಪೂರ್ಣ ಪ್ರದೇಶದಲ್ಲಿ ಸಾಕಷ್ಟು ನೀರು ಹರಿದು ಹೋಗುತ್ತಿದೆ. ನೀರಿನ ರಭಸಕ್ಕೆ ಮಣ್ಣು ಇನ್ನಷ್ಟು ಸವಕಳಿಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಘಾಟಿ ಪ್ರದೇಶದಲ್ಲಿ ಸಂಚರಿಸುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.