ಕೊಪ್ಪಳ: ಹೆಣ್ಣುಮಕ್ಕಳಿಗೆ ದೈಹಿಕ, ಮಾನಸಿಕ ಆರೋಗ್ಯ ಸುಧಾರಣೆಗೆ ಕಾರ್ಯಕ್ರಮ ರೂಪಿಸಬೇಕು ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ಫೂರ್ತಿ ಹದಿಹರೆಯದ ಹೆಣ್ಣು ಮಕ್ಕಳ ಸಬಲೀಕರಣ ಯೋಜನೆಯ ಜಿಲ್ಲಾ ಸಮನ್ವಯ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹದಿಹರೆಯದ ಹೆಣ್ಣುಮಕ್ಕಳಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುವುದರ ಮೂಲಕ ಅವರ ಆಹಾರ ಪದ್ಧತಿ ಮತ್ತು ಪೌಷ್ಟಿಕಾಂಶ ಮಟ್ಟದಲ್ಲಿ ಸುಧಾರಣೆ, ಮುಟ್ಟಿನ ನೈರ್ಮಲ್ಯ ಅಭ್ಯಾಸಗಳು, ಲೈಂಗಿಕ ಆರೋಗ್ಯ, ಲಿಂಗಾಧಾರಿತ ದೌರ್ಜನ್ಯದ ನಿವಾರಣೆ ಮತ್ತು ಅವರ ಮಾನಸಿಕ ಆರೋಗ್ಯವನ್ನು ಸುಧಾರಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆಗಳೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಔಪಚಾರಿಕ ಶಿಕ್ಷಣದೊಂದಿಗೆ ಬದುಕುವ ಸಾಮರ್ಥ್ಯ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಕಲೆ ಕಲಿಸಬೇಕು ಎಂದು ಅವರು ಹೇಳಿದರು.ಸ್ಫೂರ್ತಿ ಯೋಜನೆ ಕೆ.ಎಚ್.ಪಿ.ಟಿ ಸಂಸ್ಥೆಯು ಹದಿಹರೆಯದ ಹೆಣ್ಣುಮಕ್ಕಳ ಕುಟುಂಬ, ಹುಡುಗರು ಮತ್ತು ಸಮುದಾಯದ ಗುಂಪುಗಳ ಜೊತೆ ಕೆಲಸ ಮಾಡುವುದರ ಮೂಲಕ ಅವರ ಒಟ್ಟು ಬದುಕಿನ ಗುಣಮಟ್ಟ ಸುಧಾರಿಸಲು, ರಾಜ್ಯದ ಏಳು ಆಯ್ದ ಜಿಲ್ಲೆಗಳಲ್ಲಿ ಸ್ಫೂರ್ತಿ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯು ಹದಿಹರೆಯದ ಹೆಣ್ಣುಮಕ್ಕಳಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುವುದರ ಮೂಲಕ ಅವರ ಆಹಾರ ಪದ್ಧತಿ ಮತ್ತು ಪೌಷ್ಟಿಕಾಂಶ ಮಟ್ಟದಲ್ಲಿ ಸುಧಾರಣೆಯನ್ನು ತರುವುದು, ಸುರಕ್ಷತೆ, ಆರೋಗ್ಯಕರ ಅಭ್ಯಾಸಗಳು ಮತ್ತು ಲಿಂಗ ಸಮಾನತೆ ಮಾನದಂಡಗಳನ್ನು ಸುಧಾರಿಸುವುದು ಈ ಯೋಜನೆಯ ಗುರಿಯಾಗಿದೆ. ಮಾದರಿ ಮತ್ತು ಸಮವರ್ತಿ ಹೆಣ್ಣು ಮಕ್ಕಳು ಶಿಕ್ಷಣ ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಹೆಣ್ಣು ಮಕ್ಕಳು ತಮ್ಮ ಮದುವೆಗೆ ಸಂಬಂಧಿಸಿದ ನಿರ್ಧಾರ-ತೆಗೆದುಕೊಳ್ಳುವಿಕೆಯನ್ನು ಹೆಚ್ಚಿಸುವುದು, ಹೆಣ್ಣುಮಕ್ಕಳ ಪೌಷ್ಟಿಕಾಂಶದ ಮಟ್ಟ ಮತ್ತು ಭೌತಿಕ ದ್ರವ್ಯರಾಶಿ ಸೂಚಿಯನ್ನು ಹೆಚ್ಚಿಸುವುದಾಗಿದೆ. ಈ ಅಂಶಗಳನ್ನು ಒಳಗೊಂಡಂತೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆಯು ವಿವಿಧ ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಹದಿಹರೆಯದ ಹೆಣ್ಣುಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ತರಬೇತಿ ಹಾಗೂ ಸಂಪನ್ಮೂಲಗಳನ್ನು ಒದಗಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.ಹೆಣ್ಣುಮಕ್ಕಳಿಗೆ ಮಹಿಳಾ ಸಾಧಕರೊಂದಿಗೆ ಕಲಿಕಾ ಭೇಟಿಗೆ ಏರ್ಪಾಡು ಮಾಡಬೇಕು. ಜೊತೆಗೆ ಹದಿಹರಿಯದವರ ಆರೋಗ್ಯ, ಸಮಸ್ಯೆಗಳು, ಪರಿಹಾರಗಳ ಕುರಿತು ಶಿಬಿರಗಳನ್ನು ಮಾಡಬೇಕು. ಪಾಲಕರೊಂದಿಗೆ ಮಕ್ಕಳ ಬಗ್ಗೆ ಚರ್ಚೆ ಮಾಡಬೇಕು. ಪ್ರಮುಖವಾಗಿ ಗ್ರಾಮದ ಮಕ್ಕಳ ಬೆಳವಣಿಗೆಗೆ ಕೈಜೋಡಿಸಬೇಕು. ಪಾಲಕರೊಂದಿಗೆ ಮಕ್ಕಳ ಕಾರ್ಯಚಟುವಟಿಕೆಗಳ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕು. ಮಕ್ಕಳು ಕೂಡ ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕ್ರಮ ವಹಿಸಬೇಕು ಎಂದರು.ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ, ಎಸ್ಪಿ ಯಶೋದಾ ವಂಟಿಗೋಡಿ ಮಾತನಾಡಿದರು.ಕೆಎಚ್‌ಪಿಟಿ ಸಂಸ್ಥೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಮಂಜುನಾಥ ದೊಡವಾಡ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ, ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮದ ಪ್ರಕಾಶ ವಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಇದ್ದರು.