- ನ್ಯಾ.ನಾಗಮೋಹನ ದಾಸ್ ಆಯೋಗಕ್ಕೆ ಸಮಾಜದ ಮುಖಂಡ ಮಲ್ಲೇಶ ನಾಯ್ಕ ಒತ್ತಾಯ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣಕ್ಕೆ ರಚಿಸಲಾದ ನ್ಯಾ. ಎಚ್.ಎನ್. ನಾಗಮೋಹನ ದಾಸ್ ಏಕಸದಸ್ಯ ಆಯೋಗ ಕೈಗೊಂಡಿರುವ ಜನಗಣತಿಯಲ್ಲಿ 101 ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಬಂಜಾರ (ಲಂಬಾಣಿ) ಜನರ ಗಣತಿ ಬಗ್ಗೆ ವಿಶೇಷ ಕಾಳಜಿ ವಹಿಸುವ ಜೊತೆಗೆ ಆಯೋಗ, ಸರ್ಕಾರ ದತ್ತಾಂಶ ಸಂಗ್ರಹಿಸಲು ವಿಶೇಷ ಮಾನದಂಡ ಹಾಕಿಕೊಳ್ಳಬೇಕು ಎಂದು ಸಮಾಜದ ಮುಖಂಡ, ವಕೀಲ ಕೆ.ಆರ್. ಮಲ್ಲೇಶ ನಾಯ್ಕ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ 7 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ನೀಡಿದ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಸಾಧ್ಯ, ಇದು ಸಂವಿಧಾನದ ಅನುಚ್ಚೇದ-14ರಂತೆ ಮಾಡಬಹುದಾಗಿದ್ದು, ಒಳಮೀಸಲಾತಿ ಅಧಿಕಾರ ಆಯಾ ರಾಜ್ಯ ಸರ್ಕಾರಕ್ಕೆ ಇದೆ ಎಂಬ ತೀರ್ಪು ನೀಡಿದೆ ಎಂದರು.
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರವೇ ತಾವು ಕೆಲಸ ಮಾಡಬೇಕೆಂದು ಆಯೋಗ ಹೇಳಿದೆ. ಶೈಕ್ಷಣಿಕ, ಸರ್ಕಾರಿ ನೌಕರಿ, ಸಾಮಾಜಿಕ, ರಾಜಕೀಯ ಪ್ರಾತಿನಿದ್ಯತೆ ಜೊತೆಗೆ ಭೂ ಒಡೆತನ, ವಸತಿ, ಕಸುಬು, ವರಮಾನ ಸೇರಿದಂತೆ ಹೆಚ್ಚುವರಿ ಮಾಹಿತಿಯೆಂದರೆ ವಿ.ವಿ.ಗಳಲ್ಲಿ ಬೋಧಕ-ಬೋಧಕೇತರ ಸರ್ಕಾರದ-43 ಇಲಾಖೆಗಳು, ನಿಗಮ ಮಂಡಳಿಗಳು, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಗುಂಪಿನ ನೌಕರರಲ್ಲಿರುವ ಪರಿಶಿಷ್ಟ ಜಾತಿಯವರ ವಿವರ ಪಡೆಯುವುದಾಗಿದೆ ಎಂದು ಮಲ್ಲೇಶ ನಾಯ್ಕ ತಿಳಿಸಿದರು.
ರಾಜ್ಯದ ಅನೇಕ ಜಿಲ್ಲೆಗಳ ತಾಂಡಾಗಳಿಂದ ಜೀವನೋಪಾಯಕ್ಕಾಗಿ ಕಾಫಿತೋಟ, ಘಟ್ಟ ಪ್ರದೇಶ, ದೊಡ್ಡ ದೊಡ್ಡ ನಗರ, ಮಹಾನಗರ, ಕಬ್ಬು ಕಡೆಯಲು, ಗೋವಾ, ಮಹಾರಾಷ್ಟ್ರ ಸೇರಿದಂತೆ ಅನ್ಯ ಜಿಲ್ಲೆಗಳಿಗೆ ಕೂಲಿ ಕೆಲಸಗಳಿಗೆ ಗುಳೆ ಹೋಗಿದ್ದಾರೆ. ಪರಿಣಾಮ ದತ್ತಾಂಶ ಸಂಗ್ರಹಿಸುವುದು ಸರಿಯಾಗಿ ಆಗದಿರುವ ಬಗ್ಗೆ ಈ ಜನಾಂಗದ ಸಂಘಟನಗಳಿಗೆ, ನಾಯಕರಿಗೆ ಆತಂಕ ಇದೆ. ಈ ಹಿನ್ನೆಲೆ ವಿಶೇಷ ಗಮನ ನೀಡಿ, ಯಾರನ್ನೂ ಬಿಡದಂತೆ ಜನಗಣತಿ ಮಾಡಿ, ದತ್ತಾಂಶ ಸಂಗ್ರಹಿಸಲು ಏನಾದರೂ ವಿಶೇಷ ಮಾನದಂಡಗಳನ್ನು ಆಯೋಗ ಹಾಕಿಕೊಳ್ಳಬೇಕು ಎಂದು ಮಲ್ಲೇಶ ನಾಯ್ಕ ಮನವಿ ಮಾಡಿದರು.
- - -
ದಾವಣಗೆರೆಯಲ್ಲಿ ಲಂಬಾಣಿ ಸಮಾಜದ ಮುಖಂಡ, ವಕೀಲ ಕೆ.ಆರ್.ಮಲ್ಲೇಶ ನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.