ಯತ್ನಾಳ ಯಾವಾಗ್ಲೂ ಹಿಟ್‌ ಆಂಡ್‌ ರನ್‌

KannadaprabhaNewsNetwork | Published : May 7, 2025 12:49 AM
Follow Us

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಯತ್ನಾಳ ಯಾವಾಗಲೂ ಹಿಟ್ ಆಂಡ್ ರನ್ ಮಾಡುತ್ತಾರೆ. ಈಗಲೂ ನಾನು ರಾಜೀನಾಮೆ ನೀಡಲು ಸಿದ್ದ, ಖಾಲಿ ಪತ್ರದಲ್ಲಿ ಸಹಿ ಮಾಡಿ ಕೊಡುತ್ತೇನೆ. ಸವಾಲು ಹಾಕಿರುವ ಯತ್ನಾಳ ತಾವು ರಾಜೀನಾಮೆ ನೀಡುತ್ತಾರಾ ಎಂದು ಕೃಷಿ ಮಾರುಕಟ್ಟೆ ಸಚಿವ ಶಿನಾನಂದ ಪಾಟೀಲ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಯತ್ನಾಳ ಯಾವಾಗಲೂ ಹಿಟ್ ಆಂಡ್ ರನ್ ಮಾಡುತ್ತಾರೆ. ಈಗಲೂ ನಾನು ರಾಜೀನಾಮೆ ನೀಡಲು ಸಿದ್ದ, ಖಾಲಿ ಪತ್ರದಲ್ಲಿ ಸಹಿ ಮಾಡಿ ಕೊಡುತ್ತೇನೆ. ಸವಾಲು ಹಾಕಿರುವ ಯತ್ನಾಳ ತಾವು ರಾಜೀನಾಮೆ ನೀಡುತ್ತಾರಾ ಎಂದು ಕೃಷಿ ಮಾರುಕಟ್ಟೆ ಸಚಿವ ಶಿನಾನಂದ ಪಾಟೀಲ ಪ್ರಶ್ನಿಸಿದರು.

ನಗರದ ಸಚಿವರ ಗೃಹ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೆಟರ್ ಹೆಡ್‌ನಲ್ಲಿ ನಾನು ಕೇವಲ ಸಹಿ ಮಾಡಿ ಕೊಡುತ್ತೇನೆ. ನೀವೇ ರಾಜೀನಾಮೆ ವಿಷಯ ಬರೆದು ಸಭಾಧ್ಯಕ್ಷರಿಗೆ ಕೊಡಿ. ಸವಾಲು ಹಾಕಿರುವ ಯತ್ನಾಳ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಬ್ಬರ ರಾಜೀನಾಮೆ ಪತ್ರವನ್ನು ಅವರೇ ಸಭಾಧ್ಯಕ್ಷರಿಗೆ ನೀಡಲಿ. ಬಳಸಲು ಸಾಧ್ಯವಿಲ್ಲದ ಪದ ಬಳಸಿ ಸವಾಲು ಹಾಕಿದ್ದು ಯತ್ನಾಳ ಅವರೇ ಹೊರತು ನಾನು ಸವಾಲು ಹಾಕಿಲ್ಲ. ಸವಾಲನ್ನು ನಾನು ಸ್ವೀಕಾರ ಮಾಡಿದ್ದೇನೆ, ಈಗಲೂ ನಾನು ರಾಜೀನಾಮೆಗೆ ಬದ್ಧ, ನಾನು ಷರತ್ತು ಹಾಕಿ ರಾಜೀನಾಮೆ ನೀಡಿರುವುದೇ ಇದಕ್ಕೆ ಎಂದು ಸ್ಪಷ್ಟಪಡಿಸಿದರು.

ಬಸವನಬಾಗೇವಾಡಿ, ವಿಜಯಪುರ, ಇಂಡಿ ಇವು ಯಾವೂ ಪಾಕಿಸ್ತಾನ ಅಲ್ಲ. ಹತಾಶರಾಗಿರುವ ಯತ್ನಾಳ ತಾಳ್ಮೆ ಕಳೆದುಕೊಂಡು ಪದೇ ಪದೇ ಇಂಥ ಮಾತನಾಡುತ್ತಾರೆ. ಸಾರ್ವಜನಿಕ ಜೀವನದಲ್ಲಿ ಇಂಥ ಸವಾಲು ಹಾಕಿದ ಮೇಲೆ ಹಾಕಿದವರು ಸ್ವೀಕರಿಸಿ ಮುನ್ನಡೆಯಬೇಕು. ಇಲ್ಲವೇ ಸುಮ್ಮನೇ ಇರಬೇಕು. ಮಹಮ್ಮದ್ ಪೈಗಂಭರ ಬಗ್ಗೆ ಯತ್ನಾಳ ಅವಹೇಳನಾಕಾರಿ‌ ಮಾತನಾಡಿದ್ದನ್ನು ಖಂಡಿಸಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ನಾನು ಸೇರಿ ಕಾಂಗ್ರೆಸ್‌ ಶಾಸಕರು ಭಾಗವಹಿಸಿದ್ದೇವು. ಈ ವೇಲೆ ನನ್ನ ಸಂದರ್ಶನ ಮಾಡಿದ ಖಾಸಗಿ ಸುದ್ದಿ ವಾಹಿನಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಪ್ರತಿಭಟನೆಯಲ್ಲಿ ಭಾಗವಹಿಸದ ಕುರಿತು ಪ್ರಶ್ನೆ ಕೇಳಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಪಾಲ್ಗೊಳ್ಳುವ ಕುರಿತು ಕಾರ್ಯಕ್ರಮ ಸಂಘಟಿಸಿದ್ದ ಮುಸ್ಲಿಂ ಮುಖಂಡರು ಹೇಳಿದ್ದರು. ಇದನ್ನೇ ನಾನು ಅಲ್ಲಿ ಹೇಳಿದ್ದೇನೆ. ಬೆಳಗಾವಿ ಸಮಾವೇಶಕ್ಕೆ ನಮಗೂ, ಜಿಲ್ಲೆಯ ಕಾಂಗ್ರೆಸ್ ಎಲ್ಲ ಶಾಸಕರಿಗೂ ಆಹ್ವಾನವಿತ್ತು. ನನ್ನ ಕ್ಷೇತ್ರದ ಜನರು ಬೆಳಗಾವಿ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎಂದರು.

ಈ ವಿಷಯವನ್ನು ನಾನು ಎಳೆದು ತಂದಿಲ್ಲ. ನಾನು ಮುಸ್ಲಿಮರನ್ನು ಎತ್ತಿ ಕಟ್ಟುವ ಕೆಲಸ ಮಾಡಿಲ್ಲ. ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಎಂ.ಬಿ.ಪಾಟೀಲ ಕಾರ್ಯಕ್ರಮಕ್ಕೆ ಆಗಮಿಸಬೇಕಿತ್ತು ಎಂದು ಹೇಳಿದ್ದೆ. ಸುದ್ದಿ ವಾಹಿನಿಯವರ ಪ್ರಶ್ನೆಗೆ ಸಹಜವಾಗಿ ಉತ್ತರ ನೀಡಿದ್ದೇನೆ. ಇದನ್ನೇ ಅವರು ದೊಡ್ಡದು ಮಾಡುವುದಲ್ಲ. ಪ್ರತಿಭಟನೆಗೆ ಸಚಿವ ಎಂ.ಬಿ.ಪಾಟೀಲರು ಆಗಮಿಸುತ್ತಾರೆ ನೀವು ಆಗಮಿಸಿ ಎಂದು ಮುಸ್ಲಿ ಮುಖಂಡರು ಹೇಳಿದ್ದರು. ಎಂದು ತಿಳಿಸಿದರು.

----

ಕೋಟ್‌

ಪತ್ರಕರ್ತರು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ನನ್ನ ಈ ಹೇಳಿಕೆಯನ್ನು ಸಚಿವ ಎಂ.ಬಿ.ಪಾಟೀಲ ದೊಡ್ಡದು ಮಾಡಬೇಕಿರಲಿಲ್ಲ‌. ವಿಜಯಪುರ ಪ್ರತಿಭಟನಾ ಸಮಾವೇಶದಲ್ಲಿ ನಾನು ಸಚಿವ ಎಂ.ಬಿ.ಪಾಟೀಲ ಕುರಿತು ಮಾತನಾಡಿಲ್ಲ. ವಿಷಯ ಗೊತ್ತಿದ್ದೂ ಸಚಿವ ಶಿವಾನಂದ ಪಾಟೀಲ ನನ್ನನ್ನು ಅನಗತ್ಯವಾಗಿ ಎಳೆದು ತಂದಿದ್ದಾರೆ ಎಂದು ಆಕ್ಷೇಪಿಸಿ ದೊಡ್ಡದು ಮಾಡಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಎಂ.ಬಿ.ಪಾಟೀಲರು ಹೈಕಮಾಂಡ್‌ಗೆ ದೂರು ಕೊಡುವುದಾರೆ ಕೊಡಲಿ, ಅವರ ವಿವೇಚನೆಗೆ ಬಿಟ್ಟದ್ದು.ಶಿವಾನಂದ ಪಾಟೀಲ, ಕೃಷಿ, ಮಾರುಕಟ್ಟೆ ಸಚಿವ