ಸುಹಾಸ್ ಹತ್ಯೆ ಕೇಸ್‌ ಎನ್‌ಐಎ ತನಿಖೆಗೆ ಕಾಂಗ್ರೆಸ್‌ ಹಿಂದೇಟು ಯಾಕೆ: ಸಂಸದ ಕ್ಯಾ.ಚೌಟ ಪ್ರಶ್ನೆ

KannadaprabhaNewsNetwork |  
Published : May 07, 2025, 12:49 AM IST
ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ಪ್ರೆಸ್‌  | Kannada Prabha

ಸಾರಾಂಶ

ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಈ ನಿರಾಕರಣೆ ಕೇವಲ ಆಡಳಿತಾತ್ಮಕ ವಿಳಂಬ ಮಾತ್ರವಲ್ಲ. ರಾಜ್ಯ ಸರ್ಕಾರದ ಆಶ್ರಯದಲ್ಲಿ ಬೆಳೆಯುತ್ತಿರುವ ಇಸ್ಲಾಮಿಕ್ ಮೂಲಭೂತವಾದಿ ಶಕ್ತಿಗಳೊಂದಿಗಿನ ಮೈತ್ರಿಯನ್ನು ರಕ್ಷಿಸಲು ದುರುದ್ದೇಶಪೂರ್ವಕವಾಗಿ ತನಿಖೆ ತಡೆಯುವ ಪ್ರಯತ್ನವಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.

ಕನ್ನಡಪ್ರಭ ಮಂಗಳೂರು

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗೆ ಹಸ್ತಾಂತರಿಸಲು ಕಾಂಗ್ರೆಸ್ ಸರ್ಕಾರ ನಿರಾಕರಿಸುತ್ತಿರುವುದು ಆತಂಕಕ್ಕೆ ಹಾಗೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಈ ನಿರಾಕರಣೆ ಕೇವಲ ಆಡಳಿತಾತ್ಮಕ ವಿಳಂಬ ಮಾತ್ರವಲ್ಲ. ರಾಜ್ಯ ಸರ್ಕಾರದ ಆಶ್ರಯದಲ್ಲಿ ಬೆಳೆಯುತ್ತಿರುವ ಇಸ್ಲಾಮಿಕ್ ಮೂಲಭೂತವಾದಿ ಶಕ್ತಿಗಳೊಂದಿಗಿನ ಮೈತ್ರಿಯನ್ನು ರಕ್ಷಿಸಲು ದುರುದ್ದೇಶಪೂರ್ವಕವಾಗಿ ತನಿಖೆ ತಡೆಯುವ ಪ್ರಯತ್ನವಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪೀಕರ್, ಗೃಹ ಸಚಿವರು ಸೇರಿದಂತೆ ಉನ್ನತ ಕಾಂಗ್ರೆಸ್ ನಾಯಕರ ಸಂಘಟಿತ ಪ್ರಯತ್ನದಂತೆ, ಈ ಭೀಕರ ಹತ್ಯೆ ಪ್ರಕರಣವನ್ನು ಅತ್ಯಂತ ತರಾತುರಿಯಲ್ಲಿ ಸಾಮಾನ್ಯ ಅಪರಾಧ ಪ್ರಕರಣದಂತೆ ಹಗುರವಾಗಿ ಪರಿಗಣಿಸಿ ಕೈತೊಳೆದುಕೊಂಡಿರುವುದು ಹಾಗೂ ತನಿಖೆ ಆರಂಭಕ್ಕೂ ಪೂರ್ವದಲ್ಲೇ, ಈ ಘಟನೆಯಲ್ಲಿ ಯಾವುದೇ ಸೈದ್ಧಾಂತಿಕ ಉದ್ದೇಶ ಹಾಗೂ ಇಸ್ಲಾಮಿಕ್ ಮೂಲಭೂತವಾದಿಗಳ ಪಾತ್ರವನ್ನು ನಿರಾಕರಿಸಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ನ್ಯಾಯೋಚಿತ ತನಿಖೆಗೆ ಬೆಂಬಲ ನೀಡಬೇಕಾಗಿದ್ದ ಸ್ಪೀಕರ್ , ತನಿಖೆ ಆರಂಭಕ್ಕೂ ಮೊದಲೇ ತನಿಖೆಯ ಹಾದಿ ತಪ್ಪಿಸುವಂತೆ, ಪ್ರಸ್ತುತ ಆರೋಪಿಗಳಾಗಿರುವ ವ್ಯಕ್ತಿಗಳನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿ ಕ್ಲೀನ್ ಚಿಟ್ ಕೊಟ್ಟಿರುವುದು ಅಚ್ಚರಿ ಮತ್ತು ಅಘಾತಕಾರಿ ಎಂದು ಹೇಳಿದರು.

2022ರ ಸೆಪ್ಟೆಂಬರ್‌ನಲ್ಲಿ ಪಿಎಫ್‌ಐ ನಿಷೇಧಿಸಲಾಗಿದ್ದರೂ, 2023 ರಲ್ಲಿ ಮಾಧ್ಯಮವೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯ ತನಿಖಾ ವರದಿಗಳು, ನಿಷೇಧಿತ ಸಂಘಟನೆಯ ಸದಸ್ಯರು ಮರುಸಂಘಟಿತರಾಗಿ ಎಸ್‌ಡಿಪಿಐ ಬ್ಯಾನರ್ ಅಡಿಯಲ್ಲಿ ತಮ್ಮ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರೆಸಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ. ಕರಾವಳಿ ಕರ್ನಾಟಕದಲ್ಲಿ ಎಸ್‌ಡಿಪಿಐ ನಾಯಕರು ಪಿಎಫ್‌ಐ ಕಾರ್ಯಕರ್ತರು ಈಗ ಎಸ್‌ಡಿಪಿಐ ಕಾರ್ಯಕರ್ತರು ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇವರು ತಮ್ಮ ಗುರುತನ್ನು ಮರೆಮಾಚಿ ಕಾನೂನಿನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಈ ಕಾರ್ಯಕರ್ತರಿಗೆ ದಕ್ಷಿಣ ಕನ್ನಡ ಮತ್ತು ಬೇರೆಡೆಯಿಂದ ಹಣ ಮತ್ತು ಲಾಜಿಸ್ಟಿಕಲ್ ವ್ಯವಸ್ಥೆಯ ಸಹಾಯ ಸಿಗುತ್ತಿದ್ದು, ಅದು ಅವರ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಬಲಪಡಿಸಿದೆ‌ ಎಂದು ಅವರು ಆರೋಪಿಸಿದರು.ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಗೃಹಸಚಿವರು ಇಲ್ಲಿನ ಜನಪ್ರತಿನಿಧಿಗಳ ಜತೆ ಸಭೆ ನಡೆಸದೇ ಮುಸ್ಲಿಂ ಪುಡಾರಿಗಳ ಜತೆ ಸಭೆ ನಡೆಸಿದ್ದಾರೆ. ಎಸ್‌ಡಿಪಿಐ ನಾಯಕರು, ಪಿಎಫ್ಐ ಕಾರ್ಯಕರ್ತರನ್ನು ಸಂತೈಸಿ ತೆರಳಿದ್ದಾರೆ. ಸುಹಾಸ್ ರೌಡಿಶೀಟರ್ ಎಂದು ಗೃಹ ಸಚಿವರು, ಕಾಂಗ್ರೆಸಿಗರು ಹೇಳುತ್ತಿದ್ದಾರೆ. ಹಾಗಾದರೆ ಡಿಸಿಎಂ ಡಿಕೆಶಿ ವಿರುದ್ಧ 19 ಪ್ರಕರಣ ಇದೆ. ಅವರನ್ನೂ ರೌಡಿಶೀಟರ್ ಎನ್ನುತ್ತಾರೆಯೇ? ಸುಹಾಸ್ ಹತ್ಯೆ ಎನ್‌ಐಎಗೆ ವಹಿಸಿದರೆ ಕಾಂಗ್ರೆಸ್-ಎಸ್‌ಡಿಪಿಐ ನಂಟು ಬಹಿರಂಗವಾಗುವ ಭಯವೇ ಎಂದು ಪ್ರಶ್ನಿಸಿದ ಸಂಸದರು, ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲೇಬೇಕು ಎಂದು ಆಗ್ರಹಿಸಿದರು

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಜಿಲ್ಲಾ ವಕ್ತಾರ ಅರುಣ್ ಶೇಟ್, ವಸಂತ ಪೂಜಾರಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ