ಬೆಂಗಳೂರು ಉತ್ತರ ಭಾಗದ ಅರಣ್ಯ ಇಲಾಖೆ ಜಾಗದಲ್ಲಿ ಬಸವಣ್ಣ ಅವರ ಹೆಸರಿನಲ್ಲಿ ಲಾಲ್ ಬಾಗ್ ಮಾದರಿ ಉದ್ಯಾನ ನಿರ್ಮಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬೆಂಗಳೂರಿನ ದಕ್ಷಿಣ ಭಾಗದಲ್ಲೂ ಇದೇ ಮಾದರಿ ಉದ್ಯಾನ ನಿರ್ಮಿಸಲು ಚಿಂತನೆ ನಡೆದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬುಧವಾರ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ತೇಜಸ್ವಿ ವಿಸ್ಮಯ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಉದ್ಯಾನ ನಗರಿ ಎಂಬ ಖ್ಯಾತಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಈ ಉದ್ಯಾನಗಳ ನಿರ್ಮಾಣಕ್ಕೆ ಜಿಬಿಎ, ಪಾಲಿಕೆ ವತಿಯಿಂದ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.

ನಮ್ಮ ರಾಜ್ಯದಿಂದ ಹೊರ ದೇಶಗಳಿಗೆ ಪ್ರತಿವಾರ 17 ವಿಮಾನದಷ್ಟು ಹೂ, ತರಕಾರಿ ರಫ್ತಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಹೂ, ತರಕಾರಿ ಮಾರುಕಟ್ಟೆ ನಿರ್ಮಿಸಲು ಮುಂದಾಗಿದ್ದೇವೆ ಎಂದ ಅವರು, ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಈ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಈ ಬಾರಿ ಪೂರ್ಣಚಂದ್ರ ತೇಜಸ್ವಿ ಅವರ ಸಿದ್ಧಾಂತ ಮೌಲ್ಯಗಳ ಪ್ರತಿಬಿಂಬವನ್ನು ಪುಷ್ಪಪ್ರದರ್ಶನದಲ್ಲಿ ರೂಪಿಸಲಾಗಿದೆ ಎಂದು ತಿಳಿಸಿದರು.

ಈ ಭಾಗದಲ್ಲಿ ಮೆಟ್ರೋ ಹಾಗೂ ಸುರಂಗದಿಂದ ಲಾಲ್‌ಬಾಗ್‌ಗೆ ತೊಂದರೆಯಾಗುತ್ತದೆ ಎಂದು ಕೆಲವರು ರಾಜಕಾರಣ ಮಾಡಿದ್ದಾರೆ. ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಈ ಐತಿಹಾಸಿಕ ಉದ್ಯಾನ ಕಾಪಾಡಲು ಬೇರೆಯವರಿಗಿಂತ ಹೆಚ್ಚಿನ ಆಸಕ್ತಿ ನನಗಿದೆ. ನಾಗರೀಕರ ಸೌಲಭ್ಯಕ್ಕೆ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಬೆಂಗಳೂರು ನಗರದ ಜನಸಂಖ್ಯೆ 70 ಲಕ್ಷದಿಂದ 1.50 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ಇಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಬೇಕಾಗಿದೆ. ಎಲ್ಲಾ ಪಾರ್ಕ್ ಹಾಗೂ ಕೆರೆ ಉಳಿಸುವುದು ನಮ್ಮ ಕರ್ತವ್ಯ. ಅದಕ್ಕೆ ಅಗತ್ಯ ಕ್ರಮವನ್ನು ನಮ್ಮ ಸರ್ಕಾರ ಕೈಗೊಳ್ಳುತ್ತಿದೆ ಎಂದು ಭರವಸೆ ನೀಡಿದರು.