ಗಾಲಿ ಜನಾರ್ದನ ರೆಡ್ಡಿಯವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಬುಲೆಟ್‌ನ್ನು ಸಹ ಪ್ರದರ್ಶಿಸಿದ್ದಾರೆ.

ಬಳ್ಳಾರಿ: ಬ್ಯಾನರ್ ಗಲಭೆ ವೇಳೆ ನನ್ನನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ಗಾಲಿ ಜನಾರ್ದನ ರೆಡ್ಡಿಯವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಬುಲೆಟ್‌ನ್ನು ಸಹ ಪ್ರದರ್ಶಿಸಿದ್ದಾರೆ. ಆದರೆ, ಜನಾರ್ದನ ರೆಡ್ಡಿಗೆ ಯಾವ ಭಾಗಕ್ಕೆ ಬುಲೆಟ್ ಬಿದ್ದಿತ್ತು ? ತಲೆಗೆ ಬಿದ್ದಿತ್ತಾ ಅಥವಾ ಮೈಗೆ ಬಿದ್ದಿತಾ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಜನಾರ್ದನ ರೆಡ್ಡಿ ಮನೆಗೆ ಬುಲೆಟ್ ಬಿದ್ದಿದೆ ಎಂದು ಹೇಳುತ್ತಾರೆ. ಮನೆಗೆ ಡ್ಯಾಮೇಜ್ ಆಗಿದೆಯಾ ? ಬುಲೆಟ್ ಮನೆಯೊಳಗೆ ಬಿದ್ದಿತ್ತಾ, ಹೊರಗಡೆ ಬಿದ್ದಿತ್ತಾ ನಮಗಂತೂ ಎಲ್ಲೂ ಕಾಣಿಸಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ರೆಡ್ಡಿಯನ್ನು ಕೊಲ್ಲಲು ಸಂಚು ರೂಪಿಸಿದ್ದರೆ, ಬುಲೆಟ್ ನ್ನು ಮಹಜರು ಮಾಡಿಸಲಿಲ್ಲ ಏಕೆ ? ರೆಡ್ಡಿ ರಕ್ಷಣೆಗೆ ಸರ್ಕಾರವೇ ಗನ್‌ಮ್ಯಾನ್ ನೀಡಿರುವಾಗ ಅವರ ರಕ್ಷಣೆ ನೀಡುವವರು ದೂರು ನೀಡಬಹುದಿತ್ತಲ್ಲವೇ ? ಏಕೆ ನೀಡಿಲ್ಲ ಎಂದು ಪ್ರಶ್ನಿಸಿದ ಡಿ.ಕೆ. ಶಿವಕುಮಾರ್, ನಮ್ಮವರು ತಪ್ಪು ಮಾಡಿದ್ದರೆ ತಪ್ಪು ಎಂದು ಹೇಳುತ್ತೇನೆ. ಮುಚ್ಚಿಕೊಳ್ಳುವುದಿಲ್ಲ. ಇಲ್ಲವಾದರೆ ಅವರನ್ನು ತಿದ್ದಲು ಸಾಧ್ಯವಿಲ್ಲ ಎಂದರು.

ಎರಡೂ ಕಡೆ ಎಫ್‌ಐಆರ್ ಆಗಿದ್ದು ಅನೇಕರ ಬಂಧನವೂ ಆಗಿದೆ. ಪೊಲೀಸರು ಸೂಕ್ತವಾಗಿ ತನಿಖೆ ಕೈಗೊಳ್ಳುತ್ತಾರೆ. ಪರಿಸ್ಥಿತಿ, ಸಮಯ ಗಮನದಲ್ಲಿ ಇಟ್ಟುಕೊಂಡು ಕ್ರಮ ವಹಿಸುತ್ತಾರೆ. ಜನಾರ್ದನ ರೆಡ್ಡಿಯವರು ಝೆಡ್ ಶ್ರೇಣಿಯ ಭದ್ರತೆ ಕೇಳಿದ್ದಾರೆ ಎಂದು ಗೊತ್ತಾಯಿತು. ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ಅವರ ಯಾವ ಮಾದರಿಯ ಭದ್ರತೆಯನ್ನಾದರೂ ಪಡೆದುಕೊಳ್ಳಲಿ. ನಮಗ್ಯಾವ ತಕರಾರೂ ಇಲ್ಲ ಎಂದರು.ಬಳ್ಳಾರಿಗೆ ಬಂದ ಬಳಿಕ ಮೃತ ಯುವಕನ ಮನೆಗೆ ತೆರಳಿ ಸಾಂತ್ವನ ಹೇಳಿದ್ದೇನೆ. ಜಿಲ್ಲಾ ಸಚಿವರು ಆರ್ಥಿಕ ನೆರವು ನೀಡಿದ್ದು, ಸರ್ಕಾರದಿಂದ ನೀಡಬೇಕಾದ ನೆರವು ನೀಡುತ್ತೇವೆ. ಬ್ಯಾನರ್ ಗಲಾಟೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರ ಜೊತೆ ಚರ್ಚೆ ಮಾಡಿದ್ದೇನೆ. ಗಲಭೆ ಪ್ರಕರಣದ ಬಗ್ಗೆ ನನಗೂ ತೀವ್ರ ಬೇಸರವಾಗಿದೆ. ಬಳ್ಳಾರಿ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ ಎಂದು ಹೇಳಿದರು.

ಗಲಾಟೆ ವಿಚಾರದಲ್ಲಿ ಕಾರ್ಯಕರ್ತರ ಬಂಧನವಾಗಿದೆ. ಆದರೆ, ಈವರೆಗೆ ಯಾವೊಬ್ಬ ಮುಖಂಡರ ಬಂಧನವಾಗಿಲ್ಲ ಏಕೆ ? ಮುಖಂಡರ ವಿರುದ್ಧವೂ ಎಫ್‌ಐಆರ್ ದಾಖಲು ಮಾಡಿರುವಾಗ ಬಂಧಿಸಲು ಯಾಕೆ ಕ್ರಮ ವಹಿಸಲಾಗಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಗೃಹ ಇಲಾಖೆ ಹಾಗೂ ತನಿಖಾ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.