ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ರಾಜಕಾರಣಿಯಲ್ಲ. ಅವರ ಹೇಳಿಕೆಗಳಿಗೆಲ್ಲ ನಾನು ಪ್ರತಿಕ್ರಿಯಿಸಲ್ಲ. ಕುಮಾರಸ್ವಾಮಿ ಅವರು ಮಾಧ್ಯಮದೆದುರು ಆರೋಪಗಳನ್ನು ಮಾಡಿ ಹೋಗುತ್ತಾರೆ. ಮಾಧ್ಯಮಗಳ ಮೂಲಕವೇ ರಾಜಕಾರಣ ಮಾಡುತ್ತೇವೆ ಎಂದು ಹೇಳುವವರಿಗೆ ಉತ್ತರಿಸುವುದಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಬೆಂಗಳೂರು : ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ರಾಜಕಾರಣಿಯಲ್ಲ. ಅವರ ಹೇಳಿಕೆಗಳಿಗೆಲ್ಲ ನಾನು ಪ್ರತಿಕ್ರಿಯಿಸಲ್ಲ. ಕುಮಾರಸ್ವಾಮಿ ಅವರು ಮಾಧ್ಯಮದೆದುರು ಆರೋಪಗಳನ್ನು ಮಾಡಿ ಹೋಗುತ್ತಾರೆ. ಮಾಧ್ಯಮಗಳ ಮೂಲಕವೇ ರಾಜಕಾರಣ ಮಾಡುತ್ತೇವೆ ಎಂದು ಹೇಳುವವರಿಗೆ ಉತ್ತರಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮನ್ನು ‘ಗ್ರೇಟ್‌ ಡಿಸಿಎಂ’ ಎಂದು ವ್ಯಂಗ್ಯವಾಡಿದ ಕುರಿತು ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಅವರಿಗೆ ನನ್ನ ಬಗ್ಗೆ ಎಷ್ಟು ಅಭಿಮಾನವಿದೆ ಎಂದು ತಿಳಿಯುತ್ತದೆ. ಅದಕ್ಕೆ ಗ್ರೇಟ್‌ ಡಿಸಿಎಂ ಎಂದಿರಬೇಕು. ಕುಮಾರಸ್ವಾಮಿ ಅವರು ಗಂಭೀರ ರಾಜಕಾರಣಿಯಲ್ಲ. ಹೀಗಾಗಿ ಅವರಿಗೆ ಉತ್ತರಿಸುವ ಅವಶ್ಯಕತೆಯಿಲ್ಲ. ಖುಷಿಗೆ ಅವರು ಮಾತನಾಡುತ್ತಾರೆ. ಮಾಧ್ಯಮಗಳೆದುರು ಮಾತನಾಡುತ್ತಲೇ ರಾಜಕಾರಣ ಮಾಡುತ್ತಿದ್ದು, ಅಂಥವರಿಗೆ ಪ್ರತಿಕ್ರಿಯಿಸಲ್ಲ ಎಂದರು.

ಮತ್ತೆ ಗಲಭೆ ಆಗಬಾರದು:

ಬಳ್ಳಾರಿ ಜನ ಈ ಹಿಂದೆ ಅನುಭವಿಸಿದ್ದೇ ಸಾಕು. ಮುಂದೆ ಬಳ್ಳಾರಿಯಲ್ಲಿ ಗಲಭೆಗಳಾಗಬಾರದು. ಪ್ರಸ್ತುತ ಬಳ್ಳಾರಿಯಲ್ಲಿ ಆಗಬಾರದ್ದು ಆಗಿದೆ. ನಮಗೂ ಅದರ ಬಗ್ಗೆ ನೋವಿದೆ. ಅಲ್ಲಿ ಶಾಂತಿ ನೆಲೆಸಲು ಎಲ್ಲ ಕ್ರಮ ಕೈಗೊಳ್ಳುತ್ತಿದ್ದೇವೆ. ಮಂಗಳವಾರ ನಾನು ಬಳ್ಳಾರಿಗೆ ತೆರಳುತ್ತೇನೆ. ನಮ್ಮ ಪಕ್ಷದ ಕಾರ್ಯಕರ್ತ ಮೃತಪಟ್ಟಿದ್ದು, ಅವರ ಕುಟುಂಬದವರನ್ನು ಭೇಟಿಯಾಗುತ್ತೇನೆ. ಕೆಪಿಸಿಸಿಯಿಂದ ರಚಿಸಲಾಗಿದ್ದ ಸಮಿತಿ ಬಳ್ಳಾರಿಗೆ ಭೇಟಿ ನೀಡಿದ ಘಟನೆ ಅವಲೋಕಿಸಿ ಮೌಖಿಕವಾಗಿ ನನಗೆ ಮಾಹಿತಿ ನೀಡಿದೆ. ಗೃಹ ಸಚಿವರು ಯಾವ ರೀತಿ ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಜನಾರ್ದನ ರೆಡ್ಡಿ ತಮ್ಮ ಪುಸ್ತಕವನ್ನು ತೆರೆದು ಓದಲಿ

ಕ್ರಿಮಿನಲ್‌ ಶಾಸಕರಿಗೆ ಡಿಸಿಎಂ ಬೆಂಬಲ ನೀಡುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಮಾಡಿರುವ ಆರೋಪಕ್ಕೆ ಉತ್ತರಿಸಿ, ನನ್ನನ್ನು ಕ್ರಿಮಿನಲ್‌ ಎಂದು ಕರೆಯುತ್ತಾರೆ. ಯಾರ ಮೇಲೆಲ್ಲ ಪ್ರಕರಣಗಳಿವೆ ಅವರೆಲ್ಲರೂ ಕ್ರಿಮಿನಲ್‌ಗಳಾದಂತೆಯೇ ಅಲ್ಲವೇ? ಬೇರೆಯವರನ್ನು ಕ್ರಿಮಿನಲ್‌ ಎನ್ನುವ ಜನಾರ್ದನ ರೆಡ್ಡಿ ತಮ್ಮ ಪುಸ್ತಕವನ್ನು ತೆರೆದು ಓದಲಿ. ಅವರ ಮೇಲೆ ಎಷ್ಟು ಪ್ರಕರಣಗಳಿವೆ, ಯಾವೆಲ್ಲ ಪ್ರಕರಣಗಳಿವೆ ಎಂಬುದನ್ನು ನೋಡಲಿ. ಮಾಜಿ ಮುಖ್ಯಮಂತ್ರಿ ಅವರ ಮೇಲೂ ಪ್ರಕರಣಗಳಿವೆ. ಶಾಸಕರು, ಸಂಸದರ ಮೇಲೂ ಹಲವು ಎಫ್‌ಐಆರ್‌ ದಾಖಲಾಗಿದೆ ಎಂದರು.