ಈಡಿಗ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದ ಪ್ರಣವಾನಂದ ಸ್ವಾಮೀಜಿ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಈಡಿಗ ಸಮುದಾಯಕ್ಕೆ ಸಿದ್ದರಾಮಯ್ಯ ಸರ್ಕಾರ ಏನೇನೂ ಅನುಕೂಲ ಮಾಡಿಲ್ಲ.

ಕನ್ನಡಪ್ರಭ ವಾರ್ತೆ ತಿಪಟೂರು

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಲ್ಲಿ ಡಿ.ಕೆ. ಶಿವಕುಮಾರ್ ಪಾತ್ರ ಮಹತ್ವದ್ದಾಗಿದ್ದು, ಅವರು ಪ್ರಭಾವಿ ನಾಯಕರಾಗಿದ್ದಾರೆ ಹಾಗೂ ಡಿ.ಕೆ.ಶಿ.ಗೆ ಕೊಟ್ಟ ಮಾತಿನಂತೆ ಸಿಎಂ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡಲೇಬೇಕು ಎಂದು ಈಡಿಗ ಸಮಾಜದ ಪೀಠಾಧ್ಯಕ್ಷರಾದ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದರು.

ತಿಪಟೂರಿನಲ್ಲಿ ಕಾರ್ಯಕ್ರಮ ನಿಮಿತ್ತ ಭೇಟಿ ನೀಡಿದ ಸಂದರ್ಭದಲ್ಲಿ ನಗರದ ಕಲ್ಪತರು ಗ್ರ್ಯಾಂಡ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇವಲ ಅಹಿಂದ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಹೊರತು, ಸಮಾಜಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗಲು ಯೋಗ್ಯರಿದ್ದಾರೆ. ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಕೇವಲ ಮೂರು ರಾಜ್ಯಗಳಲ್ಲಷ್ಟೇ ಅಧಿಕಾರದಲ್ಲಿದೆ. ಕೊಟ್ಟ ಮಾತಿನಂತೆ ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕಿದೆ. ಮಾತಿಗೆ ತಪ್ಪಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದು ಭವಿಷ್ಯ ನುಡಿದರು.

ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಸಿದ್ಧರಾಮಯ್ಯನವರು ಅಹಿಂದ ಜಾತಿಗಳಿಗೆ ಏನು ಮಾಡಿದ್ದಾರೆ ಎಂಬುದನ್ನು ಶ್ವೇತ ಪತ್ರದ ಮೂಲಕ ತಿಳಿಸಲಿ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಡಿ.ಕೆ.ಶಿ. ದುಡಿದಿದ್ದಾರೆ. ದುಡಿಮೆಗಾಗಿ ಇಂದು ಕೂಲಿ ಕೊಡಲೇಬೇಕು. ಹಾಗಾಗಿ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ರಾಜ್ಯದ ೩೨ ಹಿಂದುಳಿದ ವರ್ಗಗಳ ಮಠಾಧೀಶರು ಒಕ್ಕೊರಲಿನಿಂದ ಆಗ್ರಹಿಸಿ ಈಗಾಗಲೇ ಡಿ.ಕೆ. ಶಿವಕುಮಾರ್ ಅವರ ಮನೆಗೆ ತೆರಳಿ ಬೆಂಬಲ ಸೂಚಿಸಿದ್ದೇವೆ. ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ತಲೆಯ ಮೇಲೆ ಪ್ರಮಾಣ ಮಾಡಿ ಎರಡೂವರೆ ವರ್ಷ ನಂತರ ಸಿಎಂ ಸ್ಥಾನ ಬಿಡುವುದಾಗಿ ಅಂದು ಹೇಳಿಕೆ ನೀಡಿದ್ದ ಹಿರಿಯರು, ಅನುಭವಿಗಳಾದ ಸಿದ್ದರಾಮಯ್ಯನವರು, ಇಂದು ಆಡಿದ ಮಾತಿಗೆ ಬೆಲೆ ಕೊಡದೆ ಸ್ಥಾನ ತ್ಯಜಿಸದಿರುವುದು ದುರದೃಷ್ಟಕರ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆರ್ಯ ಈಡಿಗ ಸಮುದಾಯದ ತಾಲೂಕು ಅಧ್ಯಕ್ಷ ಎನ್.ಕೆ. ಸ್ವಾಮಿ, ರಾಷ್ಟ್ರೀಯ ಈಡಿಗ ಮಹಾಮಂಡಳಿ ಉಪಾಧ್ಯಕ್ಷ ವಿ.ಕೆ. ಮಣಿಕಂಠ, ಮುಖಂಡರಾದ ಸತೀಶ್, ನಾಗರಾಜು, ಹಾಸನ ಆರ್ಯ ಈಡಿಗ ಜಿಲ್ಲಾಧ್ಯಕ್ಷ ಒ. ಎಲ್. ಶಂಕರ್, ರಾಜ್ಯ ಮುಖ್ಯ ಸಂಚಾಲಕರಾದ ಲಕ್ಷ್ಮೀನರಸಿಂಹಯ್ಯ, ಜಿಲ್ಲಾ ಮುಖ್ಯಸಂಚಾಲಕರಾದ ಹನುಮಂತರಾಜು ಮುಂತಾದವರಿದ್ದರು.

-------

ಈಡಿಗ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಿ:

ಈಡಿಗ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದ ಪ್ರಣವಾನಂದ ಸ್ವಾಮೀಜಿ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಈಡಿಗ ಸಮುದಾಯಕ್ಕೆ ಸಿದ್ದರಾಮಯ್ಯ ಸರ್ಕಾರ ಏನೇನೂ ಅನುಕೂಲ ಮಾಡಿಲ್ಲ ಎಂದು ಆಪಾದಿಸಿದರು. ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಕೂಡಲೇ ೫೦೦ ಕೋಟಿ ರು.ಗಳನ್ನು ಬಿಡುಗಡೆ ಮಾಡಬೇಕು ಹಾಗೂ ಈಡಿಗ ಸಮುದಾಯದ ಅನೇಕ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜನವರಿ ೬ರಿಂದ ನಾರಾಯಣಗುರು ಶಕ್ತಿಪೀಠ ಕರದಾಳದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿ, ಫೆ.೨೬ಕ್ಕೆ ಫ್ರೀಡಂಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪ್ರಣವಾನಂದ ಶ್ರೀಗಳು ತಿಪಟೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.