ಸಂಕ್ರಾಂತಿ ಪ್ರಯುಕ್ತ ಖರೀದಿಯಲ್ಲಿ ತೊಡಗಿರುವ ಜನತೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಕರ ಸಂಕ್ರಮಣದ ಸಂಭ್ರಮ ಸಿಲಿಕಾನ್ ಸಿಟಿಯಲ್ಲಿ ಮನೆಮಾಡಿದ್ದು, ಬುಧವಾರ ನಗರಾದ್ಯಂತ ಕಬ್ಬು, ಗೆಣಸು, ಅವರೆಕಾಯಿ ಸಿದ್ಧ ಎಳ್ಳುಬೆಲ್ಲದ ವ್ಯಾಪಾರ ಜೋರಾಗಿದ್ದು, ಸಂಭ್ರಮ ಕಳೆಗಟ್ಟಿದೆ. ಇಂದು ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದು, ವಿಶೇಷವಾಗಿ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸಲಿದೆ.ಮಾರುಕಟ್ಟೆ ಸೇರಿದಂತೆ ದಿನಸಿ ಮಳಿಗೆಗಳಲ್ಲಿ ಸಿದ್ಧ ಎಳ್ಳು-ಬೆಲ್ಲ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಹಳ್ಳಿಗಳಿಂದ ಕಬ್ಬು ತಂದಿರುವ ರೈತರು, ವರ್ತಕರು ಅಲ್ಲಲ್ಲಿ ಮಾರುತ್ತಿದ್ದು ಜೋಡಿಗೆ ₹ 80 ರಿಂದ ₹ 200 ವರೆಗೂ ಬೆಲೆಯಿದೆ. ಸಿದ್ಧ ಎಳ್ಳು ಬೆಲ್ಲ ಕೇಜಿಗೆ ₹ 250- ₹ 300 ಮಾರಾಟವಾಗುತ್ತಿದೆ. ಜತೆಗೆ ಮನೆಯಲ್ಲಿ ಎಳ್ಳು, ಬೆಲ್ಲ, ಒಣ ಕೊಬ್ಬರಿ, ಕಡ್ಲೆಬೀಜ, ಹುರಿಗಡಲೆಗಳ ಮಿಶ್ರಣ, ಕಬ್ಬು, ಸಕ್ಕರೆ ಅಚ್ಚನ್ನು ಸೇರಿಸಿ ಸಂಕ್ರಮಣ ಮಾಡಿಕೊಂಡಿದ್ದು, ಸಂಬಂಧಿಕರು, ನೆರೆಯವರ ಜತೆಗೆ ವಿತರಿಸಿಕೊಳ್ಳುತ್ತಾರೆ. ಸಂಕ್ರಾಂತಿಯಲ್ಲಿ ಒಣ ಕೊಬ್ಬರಿ ಹಾಗೂ ತೆಂಗಿನಕಾಯಿ ಬಳಕೆ ಹೆಚ್ಚು. ಹೀಗಾಗಿ ಒಣ ಕೊಬ್ಬರಿ ಅರ್ಧ ಬಟ್ಟಲಿಗೆ ₹ 20- ₹25 ಹಾಗೂ ಪೂರ್ಣ ಬಟ್ಟಲು ₹ 40- ₹50 ನಂತೆ ಮಾರಾಟವಾಗುತ್ತಿದೆ.
ಇಂದು ಸೂರ್ಯರಶ್ಮಿ ಸ್ಪರ್ಶ:ಇಲ್ಲಿನ ಐತಿಹಾಸಿಕ ಪ್ರಸಿದ್ಧ ಶ್ರೀ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆಯಲಿವೆ. ಸಂಜೆ 5 ರಿಂದ 5.02 ರವರೆಗೆ ಸುಮಾರು ಎರಡು ನಿಮಿಷಗಳ ನಡುವೆ ಸೂರ್ಯ ರಶ್ಮಿ ಗವಿಗಂಗಾಧರೇಶ್ವರ ಸ್ವಾಮಿಯನ್ನು ಸ್ಪರ್ಶಿಸಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ಡಾ. ಸೋಮಸುಂದರ್ ದೀಕ್ಷಿತ್ ತಿಳಿಸಿದ್ದಾರೆ.
ಸ್ವಾಮಿಗೆ ಸೂರ್ಯಾಭಿಷೇಕದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಅಗತ್ಯ ಸಿದ್ಧತೆಯಾಗಿದೆ. ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸಾಗುವ ಸೂರ್ಯ ದೇವ ಶಿವದರ್ಶನ ಪಡೆಯುವ ಸಮಯವದು. ಸೂರ್ಯನ ಕಿರಣಗಳು ಬಲು ಪ್ರಖರವಾಗಿದ್ದು, ಇದು ಶಿವ ಲಿಂಗವನ್ನು ಸ್ಪರ್ಶಿಸುವ ಸಂದರ್ಭದಲ್ಲಿ ಸ್ವಾಮಿಯನ್ನು ಶಾಂತಗೊಳಿಸಲು ಶಿವನ ವಿಗ್ರಹಕ್ಕೆ ಎಳನೀರು ಮತ್ತು ಕ್ಷೀರಾಭಿಷೇಕ ಮಾಡಲಾಗುವುದು. ಬಳಿಕ ಆಲಯದಲ್ಲಿ ಸಂಕಲ್ಪ ಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.ಗವಿಗಂಗಾಧರೇಶ್ವರ ಸ್ವಾಮಿಯ ಮೇಲೆ ಸೂರ್ಯ ರಶ್ಮಿ ಹಾದುಹೋಗುವ ಅಪರೂಪದ ಕ್ಷಣ ಕಣ್ತುಂಬಿಕೊಳ್ಳಲು ಭಕ್ತರಿಗಾಗಿ ದೇವಾಲಯದ ಆಡಳಿತ ಮಂಡಳಿ ಅಗತ್ಯ ವ್ಯವಸ್ಥೆ ಮಾಡಿದೆ. ತಳ್ಳಾಟ, ನೂಕಾಟ ತಪ್ಪಿಸಲು ಸರತಿ ಸಾಲು ಹಾಗೂ ದೇವಾಲಯದ ಹೊರಗೆ ಬೃಹತ್ ಪರದೆಯ ವ್ಯವಸ್ಥೆ ಮಾಡಲಾಗಿದೆ.ಗುರುವಾರ ಬೆಳಗ್ಗೆ 5 ಗಂಟೆಗೆ ಧನುರ್ಮಾಸದ ಕೊನೆಯ ಪೂಜೆ ಜರುಗಲಿದ್ದು ಬೆಳಗ್ಗೆ 6 ಗಂಟೆಗೆ ಮಹಾಮಂಗಳಾರತಿ ಮಾಡಲಾಗುವುದು. ಮಧ್ಯಾಹ್ನ 12.30ರವರೆಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿ ಬಳಿಕ ಬಾಗಿಲು ಮುಚ್ಚಲಾಗುವುದು. ಸಂಜೆ ಸೂರ್ಯನ ಆಗಮನಕ್ಕಾಗಿ ದೇವಾಲಯವನ್ನು ಸ್ವಚ್ಛಗೊಳಿಸಿ ಅಭಿಷೇಕಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುವುದು. ಸೂರ್ಯಾಭಿಷೇಕದ ನಂತರ ಅಲಂಕಾರ, ಮಹಾಮಂಗಳಾರತಿ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಸಿಗಲಿದೆ.
ಕೇಜಿ ಹೂ, ಹಣ್ಣಗಳ ದರಕನಕಾಂಬರ ₹700-800, ಕಾಕಡ ₹ 500-600 , ಸೇವಂತಿ ₹70, ಗುಲಾಬಿ ₹80, ಚಂಡು ₹30-40, ಜೋಡಿ ಕಬ್ಬು ₹80-200, ಬೆಲ್ಲ ₹80, ಅವರೇಕಾಯಿ ₹50-70, ಸೇಬು ಹಣ್ಣು ₹160, ದಾಳಿಂಬೆ ಹಣ್ಣು 140 ರುಪಾಯಿಗೆ ಮಾರಾಟ ಮಾಡಲಾಗಿದೆ.