ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಮತ್ತೊಂದು ಬೃಹತ್ ಮರಗಳ ಮಾರಣಹೋಮಕ್ಕೆ ವೇದಿಕೆ ಸಿದ್ಧವಾಗಿದ್ದು, ಓಕಳಿಪುರದಲ್ಲಿ ರೇಷ್ಮೆ ಭವನ ನಿರ್ಮಾಣಕ್ಕಾಗಿ 628 ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ.ಓಕಳಿಪುರದಲ್ಲಿರುವ ಮುದ್ದೇನಹಳ್ಳಿಯಲ್ಲಿ ರೇಷ್ಮೆ ಇಲಾಖೆಗೆ ಸೇರಿದ ಜಾಗದಲ್ಲಿ ರೇಷ್ಮೆ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಒಂದೇ ಸೂರಿನಡಿ ರೇಷ್ಮೆ ಇಲಾಖೆಗೆ ಸಂಬಂಧಿಸಿದ ಅನೇಕ ಕಚೇರಿಗಳನ್ನು ಹೊಂದಲು ಬಹುಮಹಡಿ ಕಟ್ಟಡ ನಿರ್ಮಿಸಲು ಯೋಜನೆ ಸಿದ್ಧವಾಗಿದೆ. ಆದರೆ, ಈ ಆವರಣದಲ್ಲಿ ಅನೇಕ ದಶಕಗಳಿಂದ ಸಿಲ್ವರ್ ಓಕ್, ಹಲಸು, ಬೇವು ಸೇರಿ ವಿವಿಧ ಮಾದರಿಯ ಬೃಹತ್ ಗಾತ್ರದ ಮರಗಳಿವೆ. ಕಟ್ಟಡ ನಿರ್ಮಾಣಕ್ಕಾಗಿ ಒಟ್ಟು 628 ಮರಗಳನ್ನು ಕತ್ತರಿಸಲು ಕಟ್ಟಡ ನಿರ್ಮಾಣ ಹೊಣೆ ಹೊತ್ತಿರುವ ಲೊಕೋಪಯೋಗಿ ಇಲಾಖೆಯು ಜಿಬಿಎನಿಂದ ಅನುಮತಿ ಕೋರಿದೆ. ಮರ ಕಡಿಯುವುದಕ್ಕೆ ಜಿಬಿಎ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಿದೆ.
ನಾಗರಿಕರ ವಿರೋಧ: ಮರಗಳನ್ನು ಕಡಿಯುವುದಕ್ಕೆ ನಾಗರಿಕರು ಜಾಲತಾಣಗಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಪರಿಸರ ಮಾರಣಹೋಮ ನಡೆಯುತ್ತಿದೆ. ನಗರದ ಶೇ.70 ರಷ್ಟಿದ್ದ ಹಸಿರು ಹೊದಿಕೆ ಕೇವಲ ಐದು ದಶಕಗಳಲ್ಲಿ ಶೇ.2ಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ನಗರದ ಕಾಂಕ್ರೀಟೀಕರಣವು ಶೇ.8ರಷ್ಟು ಇದ್ದದ್ದು, ಶೇ.95 ಕ್ಕಿಂತ ಹೆಚ್ಚಾಗಿದೆ. ಈ ಮೂಲಕ ಉದ್ಯಾನನಗರಿಯು ಕಾಂಕ್ರೀಟ್ ಮರುಭೂಮಿಯಾಗಿ ಮಾರ್ಪಟ್ಟಿದೆ. ವಾಸ್ತವವಾಗಿ ನಗರದ ಪರಿಸರ ಸಮತೋಲನ ಕಾಪಾಡಲು ಮತ್ತು ಆರೋಗ್ಯಕರ ವಾತಾವರಣ ಉಳಿಸಿಕೊಳ್ಳಲು ಶೇ.30ರಷ್ಟು ಹಸಿರು ಹೊದಿಕೆ ಇರಬೇಕು ಎಂದು ಸಂದೀಪ್ ಅನಿರುಧನ್ ಎಂಬುವರು ಹೇಳಿದ್ದಾರೆ.ಬೆಂಗಳೂರಿನಲ್ಲಿ ಮರ ಕಡಿದು ರೇಷ್ಮೆ ಭವನವನ್ನು ಸ್ಥಾಪಿಸುವ ಬದಲು ರೇಷ್ಮೆ ಬೆಳೆಯುವ ಪ್ರದೇಶದಲ್ಲೇ ನಿರ್ಮಿಸುವುದು ಸೂಕ್ತ. ಬೆಂಗಳೂರಿನಲ್ಲಿ ಶುದ್ಧ ಗಾಳಿ ಉಸಿರಾಡಲು ಅಳಿದುಳಿದ ಹಸಿರು ಹೊದಿಕೆಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಬೃಹತ್ ಸಂಖ್ಯೆಯಲ್ಲಿ ಮರಗಳನ್ನು ಕಡಿಯಲು ಅವಕಾಶ ನೀಡಬಾರದು ಎಂದು ಅನೇಕರು ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ.