ಧಾರವಾಡ:

ಶಿವರಾತ್ರಿ ಮುಗಿಯುತ್ತಿದ್ದಂತೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ತುಸು ಎಚ್ಚರ ತಪ್ಪಿದರೆ ಬೆಂಕಿ ಅವಘಡಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯು ಫೈರ್‌ ಲೈನ್‌ (ಬೆಂಕಿ ನಿರೋಧಕ ಮಾರ್ಗ) ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ರೈತರೊಬ್ಬರ ಮಾವಿನ ಗಿಡಗಳು ಬೆಂಕಿಗೆ ತುತ್ತಾದ ದುರ್ಘಟನೆ ನಡೆದಿದೆ.

ತಾಲೂಕಿನ ವೆಂಕಟಾಪುರ ರೈತ ಮಂಜುನಾಥ ಹವಾಲ್ದಾರ ಅವರ ಎರಡು ಎಕರೆಯಲ್ಲಿನ 120ಕ್ಕೂ ಹೆಚ್ಚು ಮಾವಿನ ಮರಗಳು ಫೈರ್‌ ಲೈನ್‌ ಸಮಯದಲ್ಲಿ ಬೆಂಕಿಗೆ ಆಹುತಿಯಾಗಿವೆ. ಈ ಬಾರಿ ಚೆನ್ನಾಗಿ ಹೂ ಬಿಟ್ಟು ಇನ್ನೇನು ಮಾವಿನ ಕಾಯಿಗಳಾಗಿದ್ದವು. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತ ಮಂಜುನಾಥನಿಗೆ ಇದೀಗ ಶಾಕ್‌ ಹೊಡೆದಂತಾಗಿದೆ. ಬೆಂಕಿಯ ಕಾವಿಗೆ ಮಾವಿನ ಹೂ ಹಾಗೂ ಸಣ್ಣ ಸಣ್ಣ ಮಾವಿನ ಕಾಯಿಗಳು ಸುಟ್ಟು ಹೋಗಿವೆ. ಈ ಹೊಲದ ಪಕ್ಕದಲ್ಲಿಯೇ ಅರಣ್ಯ ಇಲಾಖೆಗೆ ಸೇರಿದ ಜಮೀನು ಇದೆ. ಅಲ್ಲಿ ಅರಣ್ಯ ಸಿಬ್ಬಂದಿ ಫೈರ್ ಲೈನ್ ಮಾಡುತ್ತಿದ್ದಾಗ ಸರಿಯಾಗಿ ನಿರ್ವಹಣೆ ಮಾಡದಿರುವ ಪರಿಣಾಮ ಬೆಂಕಿ ಮಂಜುನಾಥನ ಮಾವಿನ ತೋಟಕ್ಕೂ ಹಬ್ಬಿದೆ. ಇದರ ಪರಿಣಾಮ ಎಲ್ಲ ಗಿಡಗಳು ಸುಟ್ಟು ಹೋಗಿವೆ.

ಚೆನ್ನಾಗಿ ಹೂ ಬಿಟ್ಟ ಕಾರಣ ₹ 2.20 ಲಕ್ಷ ಮೊತ್ತಕ್ಕೆ ಮಾವು ಬೆಳೆಗಾರನು ಗುತ್ತಿಗೆ ನೀಡಿದ್ದರು. ಆದರೆ, ಈ ಘಟನೆಯಿಂದಾಗಿ ಗುತ್ತಿಗೆದಾರ ಹಣ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈಗ ಮಂಜುನಾಥನ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕಳೆದ ಹಲವಾರು ವರ್ಷಗಳಿಂದ ಹವಾಮಾನ ವೈಪರೀತ್ಯದಿಂದ ಮಾವಿನ ಫಸಲು ಸರಿಯಾಗಿ ಬಂದಿಲ್ಲ. ಇದೀಗ ಮರಗಳು ಸುಟ್ಟು ಹೋಗಿದ್ದರಿಂದ ರೈತ ಮತ್ತಷ್ಟು ಸಂಕಷ್ಟ ಅನುಭವಿಸುವ ಸ್ಥಿತಿ ಉಂಟಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ಈ ದುರ್ಘಟನೆ ನಡೆದಿದ್ದು, ಇಲಾಖೆ ಅಧಿಕಾರಿಗಳು ಯಾರೂ ಪರಿಶೀಲನೆ ಸಹ ಮಾಡಿಲ್ಲ. ಕೂಡಲೇ ತೋಟಕ್ಕೆ ಆಗಮಿಸಿ ಇಲಾಖೆಯಿಂದ ತಮಗೆ ಪರಿಹಾರ ಒದಗಿಸಿಕೊಡಬೇಕೆಂದು ಮಾವು ಬೆಳೆಗಾರ ಮಂಜುನಾಥ ಹವಾಲ್ದಾರ ಆಗ್ರಹಿಸುತ್ತಾರೆ.