ಮಾದಕ ವಸ್ತು ಮಾರಾಟ ಜಾಲದಲ್ಲಿ ಸಕ್ರಿಯವಾಗಿದ್ದ ಓರ್ವ ವಿದೇಶಿ ಪ್ರಜೆ ಸೇರಿದಂತೆ ನಾಲ್ವರನ್ನು ಸಿಸಿಬಿ ಹಾಗೂ ವಿವೇಕನಗರ ಠಾಣೆ ಪೊಲೀಸರು ಪ್ರತ್ಯೇಕವಾಗಿ ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾದಕ ವಸ್ತು ಮಾರಾಟ ಜಾಲದಲ್ಲಿ ಸಕ್ರಿಯವಾಗಿದ್ದ ಓರ್ವ ವಿದೇಶಿ ಪ್ರಜೆ ಸೇರಿದಂತೆ ನಾಲ್ವರನ್ನು ಸಿಸಿಬಿ ಹಾಗೂ ವಿವೇಕನಗರ ಠಾಣೆ ಪೊಲೀಸರು ಪ್ರತ್ಯೇಕವಾಗಿ ಬಂಧಿಸಿದ್ದಾರೆ.ಕೆ.ಆರ್.ಪುರದಲ್ಲಿ ನೆಲೆಸಿರುವ ನೈಜೀರಿಯಾ ಮೂಲದ ಉಚಿ ನ್ಡುಡಿ, ಬೇಗೂರಿನ ಆಕಾಶ್, ಒಡಿಶಾ ಮೂಲದ ಸಂಜಿತ್ ಬಾಗ್ ಹಾಗೂ ಮಿಥುನ್ ಕುಂಬಾರ್ ಬಂಧಿತರಾಗಿದ್ದು, ಆರೋಪಿಗಳಿಂದ 21.210 ಕೆಜಿ ಗಾಂಜಾ, 481 ಹೈಡ್ರೋ ಗಾಂಜಾ, 101 ಗ್ರಾಂ ಕೊಕೇನ್ ಹಾಗೂ ಮೊಬೈಲ್ ಗಳು ಸೇರಿದಂತೆ 1.21 ಕೋಟಿ ರು ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
₹50 ಲಕ್ಷ ಮೌಲ್ಯದ ಕೊಕೇನ್:ಬೇಗೂರು ಹಾಗೂ ಕೆ.ಆರ್.ಪುರ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಡಿಸಿಪಿ-2 ಪಿ.ರಾಜಾ ಇಮಾಮ್ ಕಾಸಿಂ ರಾಜಾ ಮಾರ್ಗದರ್ಶನದಲ್ಲಿ ಮಂಜಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ನೈಜೀರಿಯಾ ಮೂಲದ ಉಚಿ ನ್ಡುಡಿ ಬಳಿ ₹50 ಲಕ್ಷ ಮೌಲ್ಯದ ಕೊಕೇನ್ ಪತ್ತೆಯಾಗಿದೆ. ಹಲವು ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಆತ, ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದಿದ್ದ. ಇನ್ನು ಬೇಗೂರಿನ ಎಇಸಿಎಸ್ ಲೇಔಟ್‌ನಲ್ಲಿ ಆಕಾಶ್ ಸೆರೆಯಾಗಿದ್ದಾನೆ. ಈತನ ಬಳಿ ₹48 ಲಕ್ಷ ಮೌಲ್ಯದ 481 ಗ್ರಾಂ ಹೈಡ್ರೋ ಗಾಂಜಾ ಜಪ್ತಿಯಾಗಿದೆ. ವಿದೇಶದಿಂದ ಕಾನೂನುಬಾಹಿರವಾಗಿ ಹೈಡ್ರೋಗಾಂಜಾ ತಂದು ನಗರದಲ್ಲಿ ದುಬಾರಿ ಬೆಲೆಗೆ ಆತ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಒಡಿಶಾ ಪೆಡ್ಲರ್‌ಗಳು ಸೆರೆ:ವಿವೇಕನಗರ ಪೊಲೀಸರ ಮತ್ತೊಂದು ಕಾರ್ಯಾಚರಣೆಯಲ್ಲಿ ಒಡಿಶಾ ಪೆಡ್ಲರ್‌ಗಳಾದ ಸಂಜಿತ್ ಬಾಗ್ ಹಾಗೂ ಮಿಥುನ್ ಕುಂಬಾರ್ ಸೆರೆಯಾಗಿದ್ದಾರೆ. ಈ ಆರೋಪಿಗಳಿಂದ ₹21 ಲಕ್ಷ ಮೌಲ್ಯದ 21 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಹಲವು ದಿನಗಳಿಂದ ಒಡಿಶಾ ರಾಜ್ಯದಿಂದ ನಗರಕ್ಕೆ ಗಾಂಜಾ ಸಾಗಾಣಿಕೆಯಲ್ಲಿ ಆರೋಪಿಗಳು ಸಕ್ರಿಯವಾಗಿದ್ದರು. ಈ ತಂಡಕ್ಕೆ ರಾಜಸ್ಥಾನ ಮೂಲದ ವ್ಯಕ್ತಿ ಲೀಡರ್ ಆಗಿದ್ದು, ಆತನ ಸೂಚನೆ ಮೇರೆಗೆ ಒಡಿಶಾದಿಂದ ಗಾಂಜಾ ಸಾಗಾಣಿಕೆ ನಡೆಯುತ್ತಿತ್ತು. ಒಡಿಶಾದ ಪೆಡ್ಲರ್‌ಗಳಿಂದ ಬೆಂಗಳೂರು, ಚೆನ್ನೈ ಹಾಗೂ ಕೇರಳಕ್ಕೆ ರಾಜಸ್ಥಾನದ ವ್ಯಕ್ತಿ ಗಾಂಜಾ ಪೂರೈಕೆ ಮಾಡುತ್ತಿದ್ದ. ಈತನ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.