ಭಾರತದಲ್ಲಿ ಪ್ರತಿವರ್ಷವೂ ರಸ್ತೆ ಅಪಘಾತಗಳ ಪ್ರಮಾಣ ಶೇ.8ರಿಂದ 9ರಷ್ಟು ಹೆಚ್ಚುತ್ತಿದ್ದು, ಶೇ.50ರಷ್ಟು ವಾಹನಗಳು, ವೇಗಮಿತಿ ಪಾಲಿಸದಿರುವುದೇ ರಸ್ತೆ ಅಪಘಾತಗಳ ಅತಿದೊಡ್ಡ ಕಾರಣವಾಗಿದೆ ಎಂದು ನಿಮ್ಹಾನ್ಸ್‌ನ ಹಿರಿಯ ಪ್ರಾಧ್ಯಾಪಕರೂ, ರಸ್ತೆ ಸುರಕ್ಷತಾ ಸಲಹೆಗಾರ ಡಾ.ಜಿ.ಗುರುರಾಜ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಭಾರತದಲ್ಲಿ ಪ್ರತಿವರ್ಷವೂ ರಸ್ತೆ ಅಪಘಾತಗಳ ಪ್ರಮಾಣ ಶೇ.8ರಿಂದ 9ರಷ್ಟು ಹೆಚ್ಚುತ್ತಿದ್ದು, ಶೇ.50ರಷ್ಟು ವಾಹನಗಳು, ವೇಗಮಿತಿ ಪಾಲಿಸದಿರುವುದೇ ರಸ್ತೆ ಅಪಘಾತಗಳ ಅತಿದೊಡ್ಡ ಕಾರಣವಾಗಿದೆ ಎಂದು ನಿಮ್ಹಾನ್ಸ್‌ನ ಹಿರಿಯ ಪ್ರಾಧ್ಯಾಪಕರೂ, ರಸ್ತೆ ಸುರಕ್ಷತಾ ಸಲಹೆಗಾರ ಡಾ.ಜಿ.ಗುರುರಾಜ್‌ ತಿಳಿಸಿದ್ದಾರೆ.

ಬೆಂಗಳೂರು ವಕೀಲರ ಸಂಘ (ಎಎಬಿ) ಹೈಕೋರ್ಟ್‌ನಲ್ಲಿ ಬುಧವಾರ ಆಯೋಜಿಸಿದ್ದ ‘ರಸ್ತೆ ಸುರಕ್ಷಾ ಜಾಗೃತಿ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ರಸ್ತೆ ಅಪಘಾತಗಳು ಮತ್ತು ಸಾವು–ನೋವುಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. ಜನಸಂಖ್ಯೆಗೆ ಸಮಾನವಾಗಿ ವಾಹನಗಳ ಸಂಖ್ಯೆ ಹೆಚ್ಚಿದೆ. . ಶೇ 40ರಷ್ಟು ಅಪಘಾತಗಳು ಹೆದ್ದಾರಿಯಲ್ಲೇ ಸಂಭವಿಸುತ್ತಿವೆ. ಕರ್ನಾಟಕದಲ್ಲಿ ವರ್ಷಕ್ಕೆ 10 ಸಾವಿರಕ್ಕಿಂತಲೂ ಹೆಚ್ಚಿನ ಜನ ದುರ್ಮರಣಕ್ಕೀಡಾಗುತ್ತಿದ್ದಾರೆ. ಈ ಪೈಕಿ ಬಹಳಷ್ಟು ಜನರು ಪಾದಚಾರಿ ಹಾಗೂ ದ್ವಿಚಕ್ರ ವಾಹನ ಸವಾರರೇ ಆಗಿದ್ದಾರೆ. ಅದರಲ್ಲೂ ಶೇ 70ರಷ್ಟು ಯುವ ಜನಾಂಗವೇ ಇದಕ್ಕೆ ಬಲಿಯಾಗುತ್ತಿದ್ದಾರೆ ಎಂದರು.

ದ್ವಿಚಕ್ರ ವಾಹನಗಳ ಸವಾರರ ಪೈಕಿ ಶೇ.18ರಷ್ಟು ಪ್ರಮಾಣದ ಸವಾರರು ಮಾತ್ರವೇ ಹೆಲ್ಮೆಟ್ ಧರಿಸುತ್ತಿದ್ದಾರೆ.ಮದ್ಯ ಸೇವಿಸಿ ವಾಹನ ಚಾಲನೆ. ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಸಹ ಅಪಘಾತಗಳಿಗೆ ಕಾರಣವಾಗಿದೆ. ಇದರಿಂದ ಎಲ್ಲೆಂದರಲ್ಲಿ ಮದ್ಯದಂಗಡಿಗಗಳನ್ನು ಆರಂಭಿಸಲು ಅನುಮತಿ ನೀಡಬಾರದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಅನು ಶಿವರಾಮನ್‌, ಎಸ್‌.ವಿಶ್ವಜಿತ್‌ ಶೆಟ್ಟಿ, ರಾಜ್ಯ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ, ಸಾರಿಗೆ ಇಲಾಖೆ ಆಯುಕ್ತ ಎ.ಎಂ.ಯೋಗೇಶ್‌, ಪೊಲೀಸ್‌ ಇಲಾಖೆ ಜಂಟಿ ಆಯುಕ್ತ ಕಾರ್ತಿಕ ರೆಡ್ಡಿ, ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಪ್ರವೀಣ್‌ ಗೌಡ ಉಪಸ್ಥಿತರಿದ್ದರು.