ಮಂಡ್ಯ: ಅನುತ್ತೀರ್ಣಗೊಂಡ ಮಕ್ಕಳು ಮತ್ತೆ ಉತ್ತೀರ್ಣರಾಗಲು ಶಿಕ್ಷಕರು ಪೂರಕ ವಾತಾವರಣ ಕಲ್ಪಿಸಬೇಕು ಎಂದು ಉತ್ತರವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ಸೌಭಾಗ್ಯ ಸಲಹೆ ನೀಡಿದರು.
ಜಿಲ್ಲೆಯಲ್ಲಿ ನಡೆದ 10ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಮಂಡ್ಯ ಉತ್ತರ ವಲಯ ಪ್ರಥಮ ಸ್ಥಾನ ಪಡೆದಿರುವುದು ಸಂತಸ ತಂದಿದೆ. ಅದೇ ರೀತಿ ಮತ್ತೊಂದು ಪರೀಕ್ಷೆಯಲ್ಲಿ ಮಕ್ಕಳ ಕಲಿಕೆ ಗಟ್ಟಿಯಾಗಿ ಪರೀಕ್ಷೆಗೆ ಅಣಿಗೊಳಿಸಬೇಕಾದ ಮಹತ್ತರ ಸವಾಲನ್ನು ಎದುರಿಸಲು ಶಿಕ್ಷಕರು ಸಿದ್ದರಾಗಬೇಕು ಎಂದು ತಿಳಿಸಿದರು. ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಪುನರಾವರ್ತನೆಯನ್ನು ನಿತ್ಯ ಆಯೋಜಿಸಿ ಕಲಿಕಾ ಪುನರ್ ಬಲವರ್ಧನೆಗೊಳಿಸಬೇಕು ಎಂದು ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಜಿ.ಕೆ.ಸತೀಶ್ ಹಾಗೂ ಜಿ.ಸಿ.ರಜನಿ ಪಾಸಿಂಗ್ ಪ್ಯಾಕೇಜ್ ಹಾಗೂ ಶಾಲೆಯಲ್ಲಿ ಗ್ರೇಡ್ ಕಡಿಮೆ ಇರುವ ಮಕ್ಕಳ ಕಲಿಕೆ ಗಟ್ಟಿಗೊಳಿಸಲು ಹಮ್ಮಿಕೊಳ್ಳುವ ಕುರಿತು ಮಾಹಿತಿ ನೀಡಿದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಆರ್.ಶಶಿಧರ ಈಚಗೆರೆ, ಪ್ರಭಾರಿ ಮುಖ್ಯ ಶಿಕ್ಷಕ ಪುಟ್ಟಸ್ವಾಮಯ್ಯ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಚ್.ಚಂದ್ರಶೇಖರ್, ಶಿಕ್ಷಕರಾದ ನೋಹನ್ ಕುಮಾರ್, ಸಂಗಪ್ಪ ರಾಜನಾಳ್, ಎ.ಆರ್.ಶ್ರೀನಿವಾಸ್, ಎಂ.ಆರ್.ಸುನೀತಾ ಹಾಗೂ ಮಂಡ್ಯ ಉತ್ತರ ವಲಯದ ಕನ್ನಡ ಶಿಕ್ಷಕರು ಇದ್ದರು.