ಗಂಗರ ಆಳ್ವಿಕೆ ಅರಿಯಲು ಸಂಶೋಧನಾ ಕೇಂದ್ರ ರಚಿಸಿ

KannadaprabhaNewsNetwork |  
Published : Jan 26, 2026, 02:00 AM IST
ಪೊಟೋ೨೫ಸಿಪಿಟಿ೧: ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬೊಂಬೆನಾಡ ಗಂಗೋತ್ಸದ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಧಕರ ಸಮಾವೇಶದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿದರು.  | Kannada Prabha

ಸಾರಾಂಶ

ಚನ್ನಪಟ್ಟಣ: ರಾಜ್ಯದ ಪ್ರಗತಿಗೆ ಗಂಗರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ, ಅವರ ಕೊಡುಗೆ ಹಾಗೂ ಆಳ್ವಿಕೆ ಕುರಿತು ಸೂಕ್ತ ಸಂಶೋಧನೆಯಾಗಿಲ್ಲ. ಗಂಗರ ಕಾಲದ ಆಳ್ವಿಕೆಯನ್ನು ಅರಿಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಂದು ಸಂಶೋಧನಾ ಕೇಂದ್ರ ಅಥವಾ ಪ್ರಾಧಿಕಾರ ರಚಿಸಬೇಕು ಎಂದು ಇತಿಹಾಸ ತಜ್ಞ ಡಾ.ತಲಕಾಡು ಚಿಕ್ಕರಂಗೇಗೌಡ ಆಗ್ರಹಿಸಿದರು

ಚನ್ನಪಟ್ಟಣ: ರಾಜ್ಯದ ಪ್ರಗತಿಗೆ ಗಂಗರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ, ಅವರ ಕೊಡುಗೆ ಹಾಗೂ ಆಳ್ವಿಕೆ ಕುರಿತು ಸೂಕ್ತ ಸಂಶೋಧನೆಯಾಗಿಲ್ಲ. ಗಂಗರ ಕಾಲದ ಆಳ್ವಿಕೆಯನ್ನು ಅರಿಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಂದು ಸಂಶೋಧನಾ ಕೇಂದ್ರ ಅಥವಾ ಪ್ರಾಧಿಕಾರ ರಚಿಸಬೇಕು ಎಂದು ಇತಿಹಾಸ ತಜ್ಞ ಡಾ.ತಲಕಾಡು ಚಿಕ್ಕರಂಗೇಗೌಡ ಆಗ್ರಹಿಸಿದರು.

ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬೊಂಬೆನಾಡ ಗಂಗೋತ್ಸವ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಸಾಧಕರ ಸಮಾವೇಶ ಮತ್ತು ಗಂಗರ ರಾಜಮನೆತನದ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಬಹುತೇಕ ಭಾಗವನ್ನು ರಾಷ್ಟ್ರಕೂಟರು ಆಳಿದ್ದರು ಎನ್ನುತ್ತಾರೆ. ರಾಷ್ಟ್ರಕೂಟರು ಆ ಮಟ್ಟಕ್ಕೆ ಬೆಳೆಯಲು ಮೂಲಭೂತವಾಗಿ ತಲಕಾಡು ಗಂಗರ ಇಮ್ಮಡಿ ಭೂತುಗ ಕಾರಣ. ನಾವು ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರು ಅಲ್ಲಿ ಗಂಗರ ಕುರುಹು ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಗಂಗರ ಆಳ್ವಿಕೆಯ ಇತಿಹಾಸ ವಿಸ್ತೃತವಾಗಿ ಅರಿಯಲು ಸರ್ಕಾರ ಒಂದು ಸಂಶೋಧನಾ ಕೇಂದ್ರ ಅಥವಾ ಪ್ರಾಧಿಕಾರ ರಚಿಸಿ, ಅದಕ್ಕೆ ಇತಿಹಾಸ ತಜ್ಞರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ಗಂಗರು ತಮ್ಮ ಆಳ್ವಿಕೆಯಲ್ಲಿ ಕೆರೆಗಳ ನಿರ್ಮಾಣ ಹಾಗೂ ಅಭಿವೃದ್ಧಿಗೆ ಒತ್ತು ನೀಡಿದ್ದರು. ಬೆಂಗಳೂರು, ಚನ್ನಪಟ್ಟಣಗಳಲ್ಲಿ ಯಾವುದೇ ಪುರಾತನ ಕೆರೆಗಳನ್ನು ತೆಗೆದುಕೊಂಡರು ಅಲ್ಲಿ ಗಂಗರ ಶಾಸನ ಸಿಗುತ್ತದೆ. ತಾಲೂಕಿನ ಕೂಡ್ಲೂರು ಕೆರೆಯನ್ನು ಅವರೇ ನಿರ್ಮಿಸಿದ್ದರು ಎಂಬ ಕುರುಹಿದೆ. ಜತೆಗೆ ಕಾವೇರಿ ನದಿಗೆ ತಲೆನೆರೆ ಎಂಬಲ್ಲಿ ಮೊದಲ ಅಣೆಕಟ್ಟೆ ನಿರ್ಮಿಸಿದರು. ಕೆರೆಗಳ ಜತೆಗೆ ಗ್ರಾಮಗಳನ್ನು ನಿರ್ಮಿಸಿದ ಅವರು, ನಾಗರೀಕತೆಯ ಬೆಳವಣಿಗೆಗೆ ಕಾರಣರಾದರು ಎಂದರು.

ಗಂಗರ ರಾಜ್ಯವನ್ನು ಶ್ರೀ ರಾಜ್ಯ ಎಂದು ಕರೆಯುತ್ತಿದ್ದರು. ಶ್ರೀ ಎಂದರೆ ಸಂಪತ್ತು, ಶ್ರೀಮಂತಿಕೆ ಇರುವ ರಾಜ್ಯ ಎನ್ನಲಾಗುತ್ತದೆ. ಅವರು ರಾಜ್ಯದ ಜತೆಗೆ ತಮಿಳನಾಡಿನ ಅರ್ಧ ಭಾಗವನ್ನು ಆಳಿದರು. ಅವರು ಆಳಿದ ತಮಿಳುನಾಡಿನ ಭಾಗವನ್ನು ಕೊಂಗನಾಡು ಎನ್ನಲಾಗುತ್ತದೆ. ಗಂಗರ ಕಾಲದಿಂದಲೂ ಅವರು ಆಳಿದ ಹಳೇ ಮೈಸೂರು ಭಾಗ ಶ್ರೀಮಂತವಾಗಿದೆ. ಅಂದು ಈ ಭಾಗದಲ್ಲಿ ಹೆಚ್ಚು ಆದಾಯ ಬರುತ್ತಿತ್ತು, ಇಂದೂ ಸಹ ಬರುತ್ತಿದೆ. ನಮ್ಮ ರಾಜ್ಯದ ಶೇ.೬೫ರಷ್ಟು ಜಿಎಸ್‌ಟಿ ಆದಾಯ ಬರುವುದೇ ಗಂಗರು ಆಳಿದ ಹಳೇ ಮೈಸೂರು ಭಾಗದಿಂದ, ತಮಿಳುನಾಡಿನಲ್ಲೂ ಹೆಚ್ಚು ಆದಾಯ ಬರುವುದು ಕೊಂಗನಾಡಿಂದ. ಇದನ್ನು ನೋಡಿದರೆ ಅವರ ಅಭಿವೃದ್ಧಿ ದೃಷ್ಟಿಕೋನ ಹೇಗಿತ್ತು ಎಂದು ತಿಳಿಯುತ್ತದೆ ಎಂದರು.

ದಕ್ಷಿಣ ಭಾರತದ ಮೊದಲ ಹಿಂದು ದೇವಸ್ಥಾನ ಇದ್ದಿದ್ದು ತಲಕಾಡಿನಲ್ಲಿ. ಗಂಗರ ಕಾಲದಲ್ಲೇ ಪ್ರಜಾಪ್ರತಿನಿಧಿ ಸಭೆ ಇತ್ತು. ಕೋಲಾರ, ತಲಕಾಡು, ಚನ್ನಪಟ್ಟಣದ ಮಕುಂದ ಮತ್ತು ನೆಲಮಂಗಲದ ಮಣ್ಣೆ ಎಂಬುದು ಗಂಗರ ಕಾಲದ ರಾಜಧಾನಿಯಾಗಿತ್ತು ಎಂಬ ಕುರುಹು ಇದೆ. ಆದ್ದರಿಂದ ಗಂಗರ ಕಾಲಘಟ್ಟದ ಕುರಿತು ಸಂಶೋಧನೆ ಅಗತ್ಯ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಸಾಧಕರನ್ನು ಸನ್ಮಾನಿಸಲಾಯಿತು. ಬೊಂಬೆನಾಡ ಗಂಗೋತ್ಸದ ಪ್ರಯುಕ್ತ ಹಮ್ಮಿಕೊಂಡಿದ್ದ ಹಲವು ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸರ್ಕಾರಿ ನೌಕರರು, ಅಂಗನವಾದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಡಾ. ಶಶಿಧರ್ ಪ್ರಸಾದ್, ಜಾನಪದ ವಿದ್ವಾಂಸ ಚಕ್ಕೆರೆ ಶಿವಶಂಕರ್, ನಿವೃತ್ತ ಐಜಿಪಿ ಅರ್ಕೇಶ್ , ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿದರು. ರೈತ ಮುಖಂಡರಾದ ಸಿ.ಪುಟ್ಟಸ್ವಾಮಿ, ಕೆ.ಮಲ್ಲಯ್ಯ, ಕೆ.ಟಿ.ಲಕ್ಷ್ಮಮ್ಮ, ರಾಧಿಕಾ ರವಿಕುಮಾರಗೌಡ, ಅಬ್ಬೂರು ರಾಜಶೇಖರ್, ಬಿ.ಟಿ.ನೇತ್ರಾವತಿ ಗೌಡ ಇತರರು ಪಾಲ್ಗೊಂಡಿದ್ದರು.

ಕೋಟ್.............

ಬೊಂಬೆನಾಡ ಗಂಗೋತ್ಸವದ ಪ್ರಯುಕ್ತ ಕಳೆದ ಕೆಲವು ದಿನಗಳಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮ ಯಶಸ್ಸಿಯಾಗಿ ನಡೆದಿದೆ. ಕಾರ್ಯಕ್ರಮದ ಯಶಸ್ಸಿಗೆ ಪಕ್ಷದ ಮುಖಂಡರೂ ಸೇರಿದಂತೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

-ಸಿ.ಪಿ.ಯೋಗೇಶ್ವರ್, ಶಾಸಕರು, ಚನ್ನಪಟ್ಟಣ

ಪೊಟೋ೨೫ಸಿಪಿಟಿ೧:

ಚನ್ನಪಟ್ಟಣದಲ್ಲಿ ಬೊಂಬೆನಾಡ ಗಂಗೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಶಾಸಕ ಯೋಗೇಶ್ವರ್ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿದರು.

ಪೊಟೋ೨೫ಸಿಪಿಟಿ2:

ಚನ್ನಪಟ್ಟಣದಲ್ಲಿ ಬೊಂಬೆನಾಡ ಗಂಗೋತ್ಸವ ಕಾರ್ಯಕ್ರಮದಲ್ಲಿ ಪಂದ್ಯಾವಳಿಯಲ್ಲಿ ವಿಜೇತವಾದ ತಂಡಕ್ಕೆ ಶಾಸಕ ಸಿ.ಪಿ.ಯೋಗೇಶ್ವರ್ ಬಹುಮಾನ ವಿತರಿಸಿದರು.

ಪೊಟೋ೨೫ಸಿಪಿಟಿ3:

ಚನ್ನಪಟ್ಟಣದಲ್ಲಿ ಬೊಂಬೆನಾಡ ಗಂಗೋತ್ಸವ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ ನೀಡಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುರೇಶ್‌ ಕುಮಾರ್‌ ವಿವಾದಾತ್ಮಕ ಹೇಳಿಕೆ : ಮಹಿಳೆಯರಿಗೆ ಅವಮಾನ ಆರೋಪ- ದೂರು
ಸರ್ಕಾರದಿಂದ ಕುಡುಕರ ಸೃಷ್ಟಿ: ಬಿವೈವಿ