ಮಕ್ಕಳ ಹಕ್ಕುಗಳ ರಕ್ಷಣೆಗೆ ಪೂರಕ ವಾತಾವರಣ ನಿರ್ಮಿಸಿ: ಶಶಿಧ‌ರ ಕೊಸಂಬೆ

KannadaprabhaNewsNetwork | Published : Dec 4, 2024 12:30 AM

ಸಾರಾಂಶ

ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ಅಥವಾ ಅವರ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ರಕ್ಷಣೆಗೆ ಮುಂದಾಗಬೇಕು ಎಂದು ಶಶಿಧ‌ರ ಕೊಸಂಬೆ ಹೇಳಿದರು.

ಕಂಪ್ಲಿ: ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ರೂಪಿಸಿರುವ ಹಕ್ಕುಗಳನ್ನು ರಕ್ಷಿಸಿ ಅವರ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವುದು ಎಲ್ಲ ಇಲಾಖೆಗಳ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧ‌ರ ಕೊಸಂಬೆ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ರಕ್ಷಣೆ'''''''' ಕುರಿತಾದ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಹಾಗೂ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಕ್ಕಳ ಹಕ್ಕುಗಳ ರಕ್ಷಣೆ ಕುರಿತಂತೆ ತಾಲೂಕು ಮಟ್ಟ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳಿಗೂ ಜವಾಬ್ದಾರಿಗಳಿದ್ದು, ಎಲ್ಲರೂ ತಮ್ಮ ವ್ಯಾಪ್ತಿಯಲ್ಲಿ ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ಅಥವಾ ಅವರ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಈ ಕುರಿತು ಪರಸ್ಪರ ಸಮನ್ವಯದೊಂದಿಗೆ ಅಗತ್ಯ ಕ್ರಮ ಕೈಗೊಂಡು, ಮಕ್ಕಳ ರಕ್ಷಣೆಗೆ ತಕ್ಷಣ ಮುಂದಾಗಬೇಕು ಎಂದರು.

ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 112/1098 ಬಗ್ಗೆ ಶಾಶ್ವತ ಫಲಕಗಳನ್ನು ಅಳವಡಿಸಬೇಕು. ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ 2016ರ ಮಾರ್ಗಸೂಚಿಯಂತೆ, ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಮಕ್ಕಳ ಸುರಕ್ಷಾ ಸಮಿತಿಗಳನ್ನು ರಚಿಸಿಕೊಂಡು ನಿಯಮಿತವಾಗಿ ಸಭೆಗಳನ್ನು ನಡೆಸಿ ಮಕ್ಕಳ ರಕ್ಷಣೆಯ ಬಗ್ಗೆ ಸದಾ ನಿಗಾವಹಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಸೀಲ್ದಾರ್ ಶಿವರಾಜ್ ಶಿವಪುರ ವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಒ ಆರ್.ಕೆ. ಶ್ರೀ ಕುಮಾರ್, ಕುರುಗೋಡು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ. ಸಿದ್ದಲಿಂಗ ಮೂರ್ತಿ, ಬಳ್ಳಾರಿ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ಎಳೆನಾಗಪ್ಪ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಎಚ್.ಸಿ. ರಾಘವೇಂದ್ರ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇತರರಿದ್ದರು.

Share this article