ಪರಿಸರ ರಕ್ಷಣೆ ಅರಿವು ಮೂಡಿಸುವ ಪಠ್ಯಕ್ರಮ ರಚಿಸಿ

KannadaprabhaNewsNetwork | Published : Jun 9, 2024 1:31 AM

ಸಾರಾಂಶ

ನಾವೆಲ್ಲ ಪರಿಸರದ ಕೂಸುಗಳು. ಪರಿಸರವಿಲ್ಲದೇ ಬದುಕಿಲ್ಲ. ಇದನ್ನು ಉಳಿಸುವುದು, ಬೆಳೆಸುವುದು ನಮ್ಮ ಕರ್ತವ್ಯ. ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಶುದ್ಧ ವಾತಾವರಣ ಹೊಂದಿರಬೇಕು.

ಧಾರವಾಡ:

ಮನುಷ್ಯ ತಾನು ಬದುಕುವ ಜತೆಗೆ ಇತರ ಜೀವರಾಶಿಗಳನ್ನು ಉಳಿಸಿಕೊಂಡು ಹೋಗುವ ಹೊಣೆಗಾರಿಕೆ ಹೊಂದಿರಬೇಕು ಎಂದು ಹಿರಿಯ ಸಾಹಿತಿ ವೀರಣ್ಣ ರಾಜೂರು ಹೇಳಿದರು.

ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಜರುಗಿದ ಪರಿಸರ ಮಿತ್ರ ಶಾಲಾ ಸ್ಪರ್ಧಾ ಯೋಜನೆಯ ಪ್ರಶಸ್ತಿ ಪ್ರದಾನ ಉದ್ಘಾಟಿಸಿದ ಅವರು, ನಾವೆಲ್ಲ ಪರಿಸರದ ಕೂಸುಗಳು. ಪರಿಸರವಿಲ್ಲದೇ ಬದುಕಿಲ್ಲ. ಇದನ್ನು ಉಳಿಸುವುದು, ಬೆಳೆಸುವುದು ನಮ್ಮ ಕರ್ತವ್ಯ. ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಶುದ್ಧ ವಾತಾವರಣ ಹೊಂದಿರಬೇಕು ಎಂದರು.

ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಈ ಪರಿಸರ ಮಿತ್ರ ಶಾಲಾ ಯೋಜನೆ ನಿಜಕ್ಕೂ ಹೆಮ್ಮೆ ಪಡುವಂತಹದ್ದು. ಅವರೊಂದಿಗೆ ನಾವೆಲ್ಲ ಕೈಜೋಡಿಸಬೇಕು. ಸರ್ಕಾರಿ ಇಂದಿನ ಶಿಕ್ಷಣ ಪದ್ಧತಿಯಲ್ಲಿ ಪರಿಸರ ರಕ್ಷಣಾ ಕ್ರಮದ ಅರಿವು ಮೂಡಿಸುವ ಪಠ್ಯಕ್ರಮ ಜಾರಿಯಲ್ಲಿ ತರಬೇಕು ಎಂದು ಹೇಳಿದರು.

ಸಮಿತಿ ಹೊರತಂದ `ಧರೆ ಕಾಯ್ವ ಮಕ್ಕಳು’ ಪುಸ್ತಕ ಬಿಡುಗಡೆಗೊಳಿಸಿದ ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ವಿಭಾಗ ಅಧಿಕಾರಿ ಗೋಪಾಲಕೃಷ್ಣ, `ಹಸಿರು ಶಾಲೆ’ ಪರಿಕಲ್ಪನೆ ಇಂದು ಬರಬೇಕಾಗಿದೆ. ನಮ್ಮ ಜೀವನ ಶೈಲಿ ಹೇಗಿರಬೇಕು ಎಂದರೆ ಪರಿಸರ ನಾಶವಾಗದಂತಿರಬೇಕು. ಪ್ರಕೃತಿ ನಮ್ಮಿಂದ ಏನನ್ನೂ ಬೇಡದು. ಆದರೂ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಅದರಿಂದ ಸುಖವುಂಡ ನಾವು ಪ್ರಕೃತಿಗೆ ಏನು ಕೊಟ್ಟಿದ್ದೇವೆ ? ಪರಿಸರ ರಕ್ಷಣೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ ಹಾಗೂ ಅಮೂಲ್ಯವಾದದ್ದು ಎಂದು ಹೇಳಿದರು.

ಯೋಜನೆಯ ಸಂಯೋಜಕ ಕೆ.ಎಚ್. ನಾಯಕ ಆಶಯ ನುಡಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಮಾತನಾಡಿದರು. ಜಿಲ್ಲಾ ಪರಿಸರ ಅಧಿಕಾರಿ ಜಗದೀಶ ಐ. ಎಚ್., ಶಿಕ್ಷಣಾಧಿಕಾರಿ ಎಸ್.ಎಂ. ಹುಡೇದಮನಿ, ಬಿಇಒ ಉಮಾ ಬಸಾಪುರ ಇದ್ದರು.

ಜಯಲಕ್ಮ್ಮಿ ಎಚ್. ನಿರೂಪಿಸಿದರು. ಪ್ರೊ. ಲಿಂಗರಾಜ, ಎಂ.ಎಂ. ಚಿಕ್ಕಮಠ, ಗೀತಾ ಕುಂಬಿ, ಜಯಶ್ರೀ ಪಾಟೀಲ, ಪ್ರಮೀಲಾ ಜಕ್ಕಣ್ಣವರ, ಪ್ರಭಣ್ಣ ಅಂಚಟಗೇರಿ, ಮಹಾಂತೇಶ ನರೇಗಲ್‌ ಇದ್ದರು. ದ್ಯಾವನಕೊಂಡ ಶಾಲೆ ಪ್ರಥಮ:

ಪ್ರಥಮ ಬಹುಮಾನ `ಪರಿಸರ ಮಿತ್ರ ಶಾಲೆ ₹ 10 ಸಾವಿರ ಹಾಗೂ ಸ್ಮರಣಿಕೆಯನ್ನು ಕಲಘಟಗಿ ದ್ಯಾವನಕೊಂಡ ಸರ್ಕಾರಿ ಶಾಲೆಗೆ ನೀಡಲಾಯಿತು. ದ್ವಿತೀಯ ಬಹುಮಾನ `ಹಸಿರು ಶಾಲೆ’ ₹ 5 ಸಾವಿರ ಕುಂದಗೋಳದ ಚಿಲಕವಾಡದ ಎಚ್.ಕೆ. ಆ್ಯಂಡ್ ಜಿ.ಕೆ. ಕೋನರೆಡ್ಡಿ ಸರ್ಕಾರಿ ಪ್ರೌಢಶಾಲೆ ಹಾಗೂ ಕುಂದಗೋಳದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗಳು ಹಂಚಿಕೊಂಡವು. ಹಾಗೆಯೇ, ತೃತೀಯ ಬಹುಮಾನ `ಹಳದಿ ಶಾಲೆ’ ₹ 3 ಸಾವಿರ ನಗದನ್ನು ಧಾರವಾಡ ಗ್ರಾಮೀಣದ ವೀರಾಪೂರ, ಹುಬ್ಬಳ್ಳಿಯ ನೂಲ್ವಿ, ಸುತಗಟ್ಟಿ ಸರ್ಕಾರಿ ಶಾಲೆಗಳು ಹಂಚಿಕೊಂಡವು. ಇನ್ನು, ಸಮಾಧಾನಕರ ಬಹುಮಾನವನ್ನು ಕುಂದಗೋಳದ ಬಿ.ವೈ. ಪಾಟೀಲ ಸರ್ಕಾರಿ ಶಾಲೆ, ಕಮಡೊಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಳ್ನಾವರದ ಕಸ್ತೂರ ಬಾ ಬಾಲಿಕಾ ವಸತಿ ವಿದ್ಯಾಲಯ, ಹಾಗೂ ಧಾರವಾಡದ ವನಿತಾ ಪ್ರಾಯೋಗಿಕ ಶಾಲೆಗೆ ನೀಡಲಾಯಿತು. ಸಮಿತಿಯ ಕಾರ್ಯದರ್ಶಿ ಡಾ. ವಿಲಾಸ ಕುಲಕರ್ಣಿ ಬಹುಮಾನ ಪ್ರಕಟಿಸಿದರು.

Share this article