ಸ್ತ್ರೀ ಸಾಧನೆಗೆ ಮುಕ್ತ ವಾತಾವರಣ ನಿರ್ಮಿಸಿ: ಡಿಸಿ ಜಾನಕಿ

KannadaprabhaNewsNetwork |  
Published : Jan 24, 2025, 12:48 AM IST
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯು 10 ವರ್ಷ ಪೂರ್ಣಗೊಳಿಸಿದ ಹಿನ್ನೆಲೆ ನಡೆದ ಕಾರ್ಯಕ್ರಮವನ್ನು ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಉದ್ಘಾಟಿಸಿದರು. | Kannada Prabha

ಸಾರಾಂಶ

ಆಧುನಿಕ ಸಮಾಜದಲ್ಲಿ ಸ್ತ್ರೀಯರಿಗೆ ಸ್ಥಾನಮಾನ ಹಾಗೂ ಸಾಧನೆಗೈಯಲು ಹೆಚ್ಚಿನ ಅವಕಾಶಗಳು ಸಿಗುತ್ತಿವೆ. ಅದೇ ರೀತಿ ಪೋಷಣೆ ಮತ್ತು ರಕ್ಷಣೆ ಸಹ ಸಿಗಬೇಕಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಹಿಳೆಯರು ಅಗಾಧವಾದ ಶಕ್ತಿ ಹೊಂದಿದ್ದು, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅವರಿಗೆ ಸಾಧನೆ ಮಾಡಲು ಮುಕ್ತ ವಾತಾವರಣ ಸಿಗುವಂತಾಗಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ನವನಗರದ ಡಾ.ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯು 10 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಪ್ರತಿಜ್ಞಾ ವಿಧಿ, ಶಾಲಾ ಮಕ್ಕಳಿಂದ ಜಾಥಾ, ಸಹಿ ಕ್ಯಾಂಪೇನ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ಸ್ತ್ರೀ ಯಾವುದೇ ಶೋಷಣೆಗೆ ಒಳಗಾದಾಗ ತನ್ನ ಸಾಮರ್ಥ್ಯ ಶಕ್ತಿ ಬಳಸಿಕೊಂಡು ಮುಂದೆ ಬರಬೇಕು. ಆಧುನಿಕ ಸಮಾಜದಲ್ಲಿ ಸ್ತ್ರೀಯರಿಗೆ ಸ್ಥಾನಮಾನ ಹಾಗೂ ಸಾಧನೆ ಮಾಡಲು ಹೆಚ್ಚಿನ ಅವಕಾಶಗಳು ಸಿಗುತ್ತಿವೆ. ಅದೇ ರೀತಿ ಪೋಷಣೆ ಮತ್ತು ರಕ್ಷಣೆ ಸಹ ಸಿಗಬೇಕಾಗಿದೆ. ಹೆಣ್ಣುಮಕ್ಕಳ ಪೋಷಣೆ, ರಕ್ಷಣೆ ಕುರಿತಂತೆ ಮನೆಯಲ್ಲಿ ಪೋಷಕರು ತಾರತಮ್ಯ ಮಾಡದೇ, ಗಂಡು ಮಕ್ಕಳಿಗೆ ಸಿಗುವ ಸ್ಥಾನಮಾನ ಹೆಣ್ಣು ಮಕ್ಕಳಿಗೆ ಸಿಗುವಂತಾಗಬೇಕು ಎಂದು ತಿಳಿಸಿದರು.ಮಕ್ಕಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಪ್ರತಿಜ್ಞಾ ವಿಧಿ ಬೋಧಿಸಿ, ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗಟ್ಟುವಲ್ಲಿ ಎಲ್ಲಾ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರು ಕೈಜೋಡಿಸಬೇಕು. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಸಂವಿಧಾನದ ಆಶಯದಂತೆ, ಸಮಾನತೆ ತರಬೇಕು ಹಾಗೂ ಪ್ರತಿ ವಿದ್ಯಾರ್ಥಿಯಲ್ಲಿಯೂ ಅಗಾಧ ಶಕ್ತಿಯಿದೆ. ಇದಕ್ಕೆ ಸಾಕ್ಷಿ ಅನ್ನುವಂತೆ ನಮ್ಮ ಜಿಲ್ಲೆಯ ಅಕ್ಷತಾ ಕೊಣ್ಣುರು ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಜಿಲ್ಲೆಯ ಹಿರಿಮೆ ಹೆಚ್ಚಿಸಿದ್ದಂತಾಗಿದೆ ಎಂದರು.

ಮುಖ್ಯ ಅತಿಥಿಗಳಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಮಾತನಾಡಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಮಾತಾ ಜೀಜಾಬಾಯಿ, ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್‌ ಸಾಧನೆ ನೆನೆದು, ಪ್ರತಿ ಹೆಣ್ಣು ಮಕ್ಕಳು ಅವರ ಹಾದಿಯಲ್ಲಿಯೇ ಧೈರ್ಯದಿಂದ ಪ್ರತಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಮಕ್ಕಳಿಗೆ ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ವೀಣಾ ಎಂ. ಬಾಲ್ಯವಿವಾಹ ನಿಷೇದ ಕಾಯ್ದೆ, ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ರುದ್ರೇಶ ಪಿಸಿಪಿಎಸ್‌ಡಿಟಿ ಕಾಯ್ದೆ ಕುರಿತು, ಜಿಲ್ಲಾ ಮಿಷನ್ ಶಕ್ತಿ ಸಂಯೋಜಕ ಸುರೇಶ ಹುಲಮನಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಕುರಿತು ಹಾಗೂ ಆಡಳಿತಾಧಿಕಾರಿ ಶಂಕ್ರಮ್ಮ, ಸಖಿ ಒನ್ ಸ್ಟಾಫ್ ಸೆಂಟರನ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷ ಎಚ್.ಎಸ್.ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಭಾಕರ ಕೆ, ಸೇರಿ ಇತರರಿದ್ದರು. ಪ್ರಾರಂಭದಲ್ಲಿ ಜಿಲ್ಲಾಡಳಿತ ಭವನದಿಂದ ಡಾ.ಅಂಬೇಡ್ಕರ ಭವನದವರೆಗೆ ಶಾಲಾ ಮಕ್ಕಳಿಂದ ಜಾಥಾ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ವಕೀಲರಿಗೆ ಮಾಹಿತಿ ನೀಡದಿದ್ರೆ ಕ್ರಮ : ಹೈ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌