ಅಂತರ್ಜಲ ಪ್ರಾಧಿಕಾರದ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸಿ: ಜಿಲ್ಲಾಧಿಕಾರಿ

KannadaprabhaNewsNetwork |  
Published : Apr 12, 2026, 02:45 AM IST
ಚಿತ್ರ : 11ಎಂಡಿಕೆ2 : ಜಿಲ್ಲಾ ಅಂತರ್ಜಲ ಸಮಿತಿ ಸಭೆ ನಡೆಯಿತು.  | Kannada Prabha

ಸಾರಾಂಶ

ಕೊಡಗು ಜಿಲ್ಲೆಯಲ್ಲಿ ಅಂತರ್ಜಲವನ್ನು ಸಂರಕ್ಷಿಸುವಲ್ಲಿ ಕೆರೆ ಹಾಗೂ ಜಲಮೂಲವನ್ನು ಉಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಅಂತರ್ಜಲವನ್ನು ಸಂರಕ್ಷಿಸುವಲ್ಲಿ ಕೆರೆ ಹಾಗೂ ಜಲಮೂಲವನ್ನು ಉಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಅಂತರ್ಜಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂತರ್ಜಲ ಅಭಿವೃದ್ಧಿ, ಸಂರಕ್ಷಣೆ ಮತ್ತಿತರ ಕುರಿತು ಸುದೀರ್ಘ ಚರ್ಚೆ ನಡೆಯಿತು. ಜಿಲ್ಲೆಯಲ್ಲಿ ಅಂತರ್ಜಲ ನಿರ್ದೇಶನಾಲಯ ಅಥವಾ ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆದು ಕಾರ್ಯನಿರ್ವಹಿಸುತ್ತಿವೆಯೇ ಎಂಬ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದರು. ಅಂತರ್ಜಲ ಇಲಾಖೆಯ ಹಿರಿಯ ಭೂ ವಿಜ್ಞಾನಿ ಎಸ್.ಸುಧಾ ಅವರು ಮಾತನಾಡಿ, ಗಾಳಿಬೀಡು, ಮಕ್ಕಂದೂರು, ಯವಕಪಾಡಿ, ಎಮ್ಮೆಮಾಡು, ಮೊಣ್ಣಂಗೇರಿ, ಕೂಡಿಗೆ, ಕುಮಾರಳ್ಳಿ, ಪೊನ್ನಂಪೇಟೆ ನಿರಾಕ್ಷೇಪಣಾ ಅರ್ಜಿಗಳನ್ನು ಪಡೆದುಕೊಂಡಿದ್ದು, ಹೊಸದಾಗಿ ಆನ್‌ಲೈನ್ ಮೂಲಕ ಮೂರು ಅರ್ಜಿಗಳು ಸ್ವೀಕೃತಿಗೊಂಡಿದೆ ಎಂದು ಮಾಹಿತಿ ನೀಡಿದರು. ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಾಯಿಸದೆ ಹಾಗೆಯೇ ಜಿಲ್ಲೆಯಲ್ಲಿ ಕೊಳವೆಬಾವಿ ಕೊರೆಯುತ್ತಿರುವ ರಿಗ್ ಯಂತ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸುಧಾ ಅವರು ವಿವರಿಸಿದರು. ಅಲ್ಲದೇ 2025-26ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಹೊಸದಾಗಿ ಕೊರೆದಿರುವ ಕೊಳವೆ ಬಾವಿಗಳ ಸಫಲತೆ, ವಿಫಲ ಕೊಳವೆ ಬಾವಿಗಳನ್ನು ಸುರಕ್ಷಿತವಾಗಿ ಮುಚ್ಚಿರುವ ಬಗ್ಗೆ ಮಾಹಿತಿ ನೀಡಿದರು. ಕೊಡಗು ಜಿಲ್ಲೆಯಲ್ಲಿ 19 ತೋಡು ಬಾವಿ ಹಾಗೂ 26 ಕೊಳವೆಬಾವಿಗಳು ಸೇರಿ ಒಟ್ಟು 45 ನಿರೀಕ್ಷಣಾ ಬಾವಿಗಳಿಂದ ಪ್ರತಿ ಮಾಹೆಯಲ್ಲಿ ಸ್ಥಿರ ಜಲಮಟ್ಟ ದಾಖಲು ಮಾಡಲಾಗುತ್ತಿತ್ತು. ಪ್ರಸ್ತುತವಾಗಿ ಕುಶಾಲನಗರ 1 ಕೊಳವೆ ಬಾವಿಯು ಇರುವ ಸ್ಥಳದಲ್ಲಿ ಕೋರ್ಟ್ ನಿರ್ಮಾಣ ಮತ್ತು ವಿರಾಜಪೇಟೆಯ 1 ಕೊಳವೆಬಾವಿ ಇರುವ ಸ್ಥಳದಲ್ಲಿ ಪ್ರವಾಸಿ ಮಂದಿರ ನಿರ್ಮಾಣ ಮಾಡಿರುವುದರಿಂದ ಮುಚ್ಚಲಾಗಿದೆ ಎಂದು ಸುಧಾ ಎಸ್. ತಿಳಿಸಿದರು. ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಕುಮಾರಸ್ವಾಮಿ ಅವರು ಮಾತನಾಡಿ, 2025-26 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯಡಿ 98 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ ಎಂದು ಮಾಹಿತಿ ನೀಡಿದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಭೂ ವಿಜ್ಞಾನಿ ದೀಕ್ಷಿತ್ ಮಾತನಾಡಿ, ಜಿಲ್ಲೆಯ ವಿವಿಧೆಡೆ ನೀರಿನ ಮಾದರಿ ಪರೀಕ್ಷೆಗಳ ವಿವರಣೆ ನೀಡಿದರು. ಅಲ್ಲದೇ ನೀರಿನ ಮಾದರಿ ಪರೀಕ್ಷೆಯಲ್ಲಿ ಕಂಡು ಬಂದಿರುವ ರಾಸಾಯನಿಕ ವರದಿಗಳನ್ನು ವಿಸ್ತೃತವಾಗಿ ಮಂಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಾಲ ಕಾಲಕ್ಕೆ ನೀರಿನ ಮಾದರಿಯನ್ನು ಪರೀಕ್ಷಿಸಿ ಶುದ್ಧ ನೀರನ್ನು ಕುಡಿಯಲು ಪೂರೈಸಬೇಕು ಮತ್ತು ಕೆರೆಗಳ ಸರ್ವೆ ಕಾರ್ಯ ಶೀಘ್ರ ನಡೆಯಬೇಕು ಎಂದು ನಿರ್ದೇಶನ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುಗಾದಿ ಹೊಸ ಚಿಂತನೆ, ಹೊಸ ಸಂಕಲ್ಪಗಳ ಆರಂಭ: ಡಾ. ಚಂದ್ರಕಾಂತ ಭಟ್
ಸಂಪಾಜೆ ಗ್ರಾಮ ಪಂಚಾಯಿತಿಗೆ 3ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ