ಯಾವುದೇ ವಸ್ತುವನ್ನು ಖರೀದಿಸಿದರೂ ರಶೀದಿ ಪಡೆಯುವುದು ಗ್ರಾಹಕರ ಮೊದಲ ಕರ್ತವ್ಯ. ರಶೀದಿ ಇಲ್ಲದೆ ವಂಚನೆಗೊಳಗಾದರೆ, ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಸಾಧ್ಯವಿಲ್ಲ.
ಗದಗ: ಯುವಜನತೆಯಲ್ಲಿ ಗ್ರಾಹಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಸುರಕ್ಷಿತವಾದ ಉತ್ಪನ್ನಗಳನ್ನು ಖರೀದಿಸಿದಾಗ ಮಾತ್ರ ಆತ್ಮವಿಶ್ವಾಸದ ಗ್ರಾಹಕರು ಆಗಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ತಿಳಿಸಿದರು.
ಸಮೀಪದ ನಾಗಾವಿಯ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕೌಶಲ್ಯ ವಿಕಾಸ ಭವನ ಗ್ರಾಮ ಗಂಗೋತ್ರಿ ಆವರಣದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಿಲ್ಲಾಮಟ್ಟದಲ್ಲಿ ಗ್ರಾಹಕರ ಹಿತರಕ್ಷಣೆಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಆಹಾರ ಸುರಕ್ಷತಾ ಅಧಿಕಾರಿ(ಅಂಕಿತ ಅಧಿಕಾರಿ) ಮತ್ತು ತೂಕ ಮಾಪನ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಇವರ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಯಾವುದೇ ವಸ್ತುವನ್ನು ಖರೀದಿಸುವಾಗ ಐಎಸ್‌ಐ, ಎಫ್‌ಎಸ್‌ಎಸ್‌ಎಐ ಮುದ್ರೆಗಳು ಮತ್ತು ಮುಕ್ತಾಯ ದಿನಾಂಕವನ್ನು ಕಡ್ಡಾಯವಾಗಿ ಪರೀಕ್ಷಿಸಬೇಕು. ಕಡ್ಡಾಯವಾಗಿ ಜಿಎಸ್‌ಟಿ ಒಳಗೊಂಡ ರಶೀದಿಯನ್ನು ಕೇಳಿ ಪಡೆಯಬೇಕು. ಆನ್‌ಲೈನ್ ವೇದಿಕೆಗಳಲ್ಲಿ ವಸ್ತುಗಳನ್ನು ಖರೀದಿಸುವಾಗ ಅಧಿಕೃತ ರಶೀದಿಗಳು ಸರಿಯಾಗಿ ಲಭ್ಯವಿರುವುದಿಲ್ಲ. ಹಾಗಾಗಿ ಗ್ರಾಹಕರು ಹೆಚ್ಚು ಜಾಗರೂಕರಾಗಿರಬೇಕು ಎಂದರು.ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆಹಾರ ವಿತರಿಸುವ ಮುನ್ನ ಅಂಕಿತ ಅಧಿಕಾರಿಗಳಿಂದ ಆಹಾರದ ಮಾದರಿಯನ್ನು ತಪಾಸಣೆ ಮಾಡಿಸುವುದು ಕಡ್ಡಾಯವಾಗಿದೆ. ಕಲಬೆರಕೆ ಆಹಾರ ಅಥವಾ ತೂಕದಲ್ಲಿ ಮೋಸವಾದರೆ ಗ್ರಾಹಕರು ಯಾವುದೇ ಹಿಂಜರಿಕೆಯಿಲ್ಲದೆ ಕೇವಲ ಸಣ್ಣ ಕಾಗದದ ಮೂಲಕವಾದರೂ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಬಹುದು ಎಂದರು.
ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎ.ಜಿ. ಮಾಲ್ದಾರ ಮಾತನಾಡಿ, ಯಾವುದೇ ವಸ್ತುವನ್ನು ಖರೀದಿಸಿದರೂ ರಶೀದಿ ಪಡೆಯುವುದು ಗ್ರಾಹಕರ ಮೊದಲ ಕರ್ತವ್ಯ. ರಶೀದಿ ಇಲ್ಲದೆ ವಂಚನೆಗೊಳಗಾದರೆ, ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಸಾಧ್ಯವಿಲ್ಲ ಎಂದರು.
ಈ ವೇಳೆ ವಿವಿ ಕುಲಪತಿ ಪ್ರೊ. ಡಾ. ಸುರೇಶ ವಿ. ನಾಡಗೌಡರ, ಡಿವೈಎಸ್‌ಪಿ ಮಹಾಂತೇಶ್ ಸಜ್ಜನ್, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ. ಪಲ್ಲೇದ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯೆ ಯಶೋದಾ ಪಾಟೀಲ, ಗುರುರಾಜ್ ಬಿ. ಗೌರಿ ಸೇರಿದಂತೆ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಮಧು ಪ್ರಾರ್ಥಿಸಿದರು. ಎಸ್.ಡಿ. ಪಾಟೀಲ ಸ್ವಾಗತಿಸಿದರು. ಸಾವಿತ್ರಿ ಪೂಜಾರ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.