ಕನ್ನಡಪ್ರಭ ವಾರ್ತೆ ಮಂಡ್ಯ
ಆರೋಗ್ಯ ಹಾಗೂ ವಾಹನಗಳಿಗೆ ವಿಮೆ ಮಾಡಿಸುವ ರೀತಿ ಬೆಳೆ ವಿಮೆ ಮಾಡಿಸುವುದನ್ನು ಸಹ ಪ್ರತಿ ವರ್ಷ ನಿರಂತರವಾಗಿ ಮಾಡಿಸುವುದನ್ನು ರೈತರು ರೂಡಿಸಿಕೊಳ್ಳಬೇಕು. ಬೆಳೆ ವಿಮೆಯಲ್ಲಿ ಶೇ.98 ರಷ್ಟು ಹಣ ಸರ್ಕಾರ ಹಾಗೂ ಶೇ.2 ರಷ್ಟು ಮಾತ್ರ ರೈತರು ಪಾವತಿಸುತ್ತಾರೆ. ಇದರ ಉಪಯುಕ್ತತೆಯ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.ಬುಧವಾರ ಜಿಪಂ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಮುಂಗಾರು ಹಂಗಾಮು ಪೂರ್ವಸಿದ್ಧತಾ ಸಭೆ ನಡೆಸಿ ಮಾತನಾಡಿ, ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಸಮಸ್ಯೆಗಳೊಂದಿಗೆ ಆಗಮಿಸಿದಾಗ ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಹೆಸರು, ದೂರವಾಣಿ ಸಂಖ್ಯೆಯನ್ನು ಪಟ್ಟಿ ಮಾಡಿಕೊಳ್ಳಿ. ಕೆಲಸವಾದ ನಂತರ ಅವರಿಗೆ ಕರೆ ಮಾಡಿ ತಿಳಿಸಿ. ಕಾನೂನು ತೊಡಕಿದ್ದರೆ ಮನವರಿಕೆ ಮಾಡಿ ಕೊಡಿ. ಇದರ ಜೊತೆಗೆ ಕೈಗೊಂಡಿರುವ ಕ್ರಮದ ವರದಿಯನ್ನು ಪ್ರತಿ ಮಾಹೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿ. ಇದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೊತ್ತು ಶಾಸಕರು, ಸಚಿವರ ಕಚೇರಿ ಅಲೆದಾಡುವುದು ತಪ್ಪುತ್ತದೆ ಎಂದರು.
ಬೋರ್‌ವೆಲ್‌ಗಳ ಪರಿಶೀಲಿಸಿ:ಜಿಲ್ಲೆಯಲ್ಲಿ 97 ಖಾಸಗಿ ಬೋರ್‌ವೆಲ್‌ಗಳಿಂದ ಒಪ್ಪಂದ ಮಾಡಿಕೊಂಡು ಬರದ ಹಿನ್ನೆಲೆ ಕುಡಿಯುವ ನೀರು ಪಡೆಯಲಾಗುತ್ತಿದೆ. ಜೂನ್ ಮಾಹೆಯಲ್ಲಿ ಉತ್ತಮ ಮಳೆಯಾಗಿದ್ದು, ಬೋರ್‌ವೆಲ್‌ಗಳಲ್ಲಿ ನೀರು ಮರು ಪೂರ್ಣವಾಗಿರುತ್ತದೆ. ಪರಿಶೀಲನೆ ನಡೆಸಿ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪಡೆಯುತ್ತಿರುವುದನ್ನು ಕೈ ಬಿಡಿ. ಅವಶ್ಯಕತೆಯಿದ್ದ ಕಡೆ ಹೊಸ ಬೋರ್‌ವೆಲ್ ಕೊರೆಯಿಸಿ ಎಂದರು.
ಈ ಹಿಂದೆ ಖಾಸಗಿ ಬೋರ್‌ವೆಲ್ ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದ್ದು, ಬಿಲ್ ಪಾವತಿಯಾಗಿಲ್ಲ ಎಂದು ದೂರುಗಳು ಬರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್‌ಗಳು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳ ಮಹಜರ್ ಮಾಡಿ ಬಿಲ್ ಪಾವತಿಸಿ ಎಂದರು.ಡಿಸೆಂಬರ್ ಅಂತ್ಯದೊಳಗೆ ಗುರಿ ಸಾಧಿಸಿ:
ಏಪ್ರಿಲ್, ಮೇ ಮಾಹೆಯಲ್ಲಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇಲಾಖಾ ಕಾರ್ಯಕ್ರಮಗಳು ಪ್ರಾರಂಭವಾಗಿಲ್ಲ. ಡಿಸೆಂಬರ್ ಅಂತ್ಯದೊಳಗೆ ಶೇ.100 ರಷ್ಟು ಗುರಿ ಸಾಧನೆಯಾಗುವಂತೆ ಯೋಜನೆ ರೂಪಿಸಿ. ಜು.10 ರೊಳಗೆ ಅವಶ್ಯಕವಿರುವ ಟೆಂಡರ್ ಪ್ರಕ್ರಿಯೆಗಳನ್ನು ಪ್ರಾರಂಭಿಸಿ ಎಂದರು.ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆಯ ಕೇಂದ್ರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ರೈತ ಸಂಪರ್ಕ ಕೇಂದ್ರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ನಿಗಾ ವಹಿಸಬೇಕು ಎಂದರು.
ಮಣ್ಣು ಪರೀಕ್ಷೆ ಆಂದೋಲನ ರೈತರು ಬೆಳೆಯುವ ಬೆಳೆ ಹಾಗೂ ಮಣ್ಣಿಗೆ ನೀಡಬೇಕಿರುವ ಪೋಷಕಾಂಶಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಮಣ್ಣು ಪರೀಕ್ಷೆ ಆಂದೋಲನ ನಡೆಸುವಂತೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.ನೋಡಲ್ ತಾಲೂಕಾಗಿ ಆಯ್ಕೆ ಮಾಡಿ:
ಒಂದು ತಾಲೂಕನ್ನು ನೋಡಲ್ ತಾಲ್ಲೂಕಾಗಿ ಆಯ್ಕೆ ಮಾಡಿ ಮಣ್ಣನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹಿಸಿ ಪರೀಕ್ಷೆಯ ನಂತರ ವರದಿ ಹಾಗೂ ಸಲಹೆಗಳನ್ನು ರೈತರ ಮೊಬೈಲ್ ಸಂಖ್ಯೆಗೆ ಒದಗಿಸುವ ರೀತಿ ಯೋಜನೆ ರೂಪಿಸಿ ಅನುಷ್ಠಾನ ಗೊಳಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.ಸಭೆಯಲ್ಲಿ ಶಾಸಕರಾದ ಪಿ.ರವಿಕುಮಾರ್, ಉದಯ್, ದರ್ಶನ್ ಪುಟ್ಟಣ್ಣಯ್ಯ, ಹೆಚ್.ಟಿ ಮಂಜು, ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ, ಕೆ.ವಿವೇಕಾನಂದ, ಮೈಷುಗರ್ ಅಧ್ಯಕ್ಷ ಸಿ.ಡಿ ಗಂಗಾಧರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಪಿ.ಸಿ ಜಾಫರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಎಸ್ಪಿ ಎನ್ ಯತೀಶ್, ಎಡಿಸಿ ಡಾ.ಎಚ್ ಎಲ್ ನಾಗರಾಜು ಇತರರಿದ್ದರು.