ಸಾಲ ಯೋಜನೆ ಕುರಿತು ಅರಿವು ಮೂಡಿಸಿ: ಜಿಪಂ ಸಿಇಒ ಈಶ್ವರ ಕಾಂದೂ

KannadaprabhaNewsNetwork |  
Published : Jun 07, 2025, 12:39 AM IST
ಸಾಲ ಯೋಜನೆಯ ಪುಸ್ತಕ ಬಿಡುಗಡೆ ಮಾಡಲಾಯಿತು  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಬ್ಯಾಂಕ್ ಗಳಲ್ಲಿ ಸಾಲ ಮತ್ತು ಠೇವಣಿ ಅನುಪಾತ ಶೇ.60ರಷ್ಟಿರಬೇಕು. ಆದರೆ ಪ್ರಸ್ತುತ ಶೇ.46.56ರಷ್ಟಿದೆ.

ಕಾರವಾರ: ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ವಿವಿಧ ಸರ್ಕಾರಿ ಯೋಜನೆಗಳಿಗೆ ತಾವು ನೀಡುವ ಸಾಲದ ಕುರಿತು ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮ ಮತ್ತು ಸಾಲ ಮೇಳ ಆಯೋಜಿಸುವ ಮೂಲಕ ಜಿಲ್ಲೆಯ ಸಾರ್ವಜನಿಕರಿಗೆ ಸರ್ಕಾರದಿಂದ ದೊರೆಯುವ ಎಲ್ಲ ವಿಧದ ಆರ್ಥಿಕ ನೆರವನ್ನು ಸುಲಭ ರೀತಿಯಲ್ಲಿ ಒದಗಿಸುವಂತೆ ಜಿಪಂ ಸಿಇಒ ಈಶ್ವರ ಕಾಂದೂ ಸೂಚನೆ ನೀಡಿದರು.

ಅವರು ಶುಕ್ರವಾರ ಜಿಪಂ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಬ್ಯಾಂಕ್ ಗಳಲ್ಲಿ ಸಾಲ ಮತ್ತು ಠೇವಣಿ ಅನುಪಾತ ಶೇ.60ರಷ್ಟಿರಬೇಕು. ಆದರೆ ಪ್ರಸ್ತುತ ಶೇ.46.56ರಷ್ಟಿದೆ. 2025ರ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯ ಬ್ಯಾಂಕ್ ಗಳಲ್ಲಿ ₹24,315 ಕೋಟಿ ಠೇವಣಿ ಸ್ವೀಕೃತವಾಗಿದೆ. ₹11,322 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಸಲ್ಲಿಕೆಯಾಗುವ ಅರ್ಜಿಗಳನ್ನು ಸಣ್ಣಪುಟ್ಟ ಕಾರಣಗಳಿಗೆ ತಿರಸ್ಕೃತಗೊಳಿಸಬೇಡಿ. ಜಿಲ್ಲೆಯಲ್ಲಿ ಕೃಷಿ, ವಸತಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಶೈಕ್ಷಣಿಕ ವಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಿಸುವಂತೆ ತಿಳಿಸಿದರು.

ಬ್ಯಾಂಕ್ ಗಳಿಗೆ ಆಗಮಿಸುವ ಹಿರಿಯ ನಾಗರಿಕರು, ವಿಕಲಚೇತನರು ಮತ್ತು ಪಿಂಚಣಿದಾರರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅವರಿಗೆ ಆದ್ಯತೆಯಲ್ಲಿ ಸೇವೆ ಒದಗಿಸಬೇಕು. ಅತ್ಯಂತ ಕಡಿಮೆ ವೆಚ್ಚದ ವಿಮಾ ಯೋಜನೆಗಳಿಗೆ ಎಲ್ಲರನ್ನು ನೋಂದಾಯಿಸಬೇಕು ಎಂದರು.

ಜಿಲ್ಲೆಯ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಹೊರಗುತ್ತಿಗೆ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ನರೇಗಾ ಕಾರ್ಮಿಕರು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಪ್ರಯೋಜನ ಪಡೆಯುವಂತೆ ತಿಳಿಸಿದರು.

ಜಿಲ್ಲೆಯಲ್ಲಿ 2025 ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ಕೃಷಿ ಕ್ಷೇತ್ರಕ್ಕೆ ₹3275 ಕೋಟಿ, ಸಣ್ಣ, ಮಧ್ಯಮ ಮತ್ತು ಸೂಕ್ಷ್ಮ ವಲಯಕ್ಕೆ ₹2773 ಕೋಟಿ, ಶೈಕ್ಷಣಿಕ ಕ್ಷೇತ್ರಕ್ಕೆ ₹73 ಕೋಟಿ, ವಸತಿ ಕ್ಷೇತ್ರಕ್ಕೆ ₹65 ಕೋಟಿ ಸೇರಿದಂತೆ ಆದ್ಯತಾವಲಯಕ್ಕೆ ಒಟ್ಟು ₹6323 ಕೋಟಿ ಸಾಲ ವಿತರಿಸಿ ಶೇ.101 ಸಾಧನೆ ಮಾಡಲಾಗಿದ್ದು, ಆದ್ಯೇತರ ವಲಯಕ್ಕೆ ₹2451 ಕೋಟಿ ವಿತರಿಸುವ ಮೂಲಕ ಶೆ.129 ರಷ್ಟು ಸಾಧನೆ ಮಾಡಲಾಗಿದೆ ಎಂದು ಕೆನರಾ ಬ್ಯಾಂಕ್ ನ ಪ್ರಾದೇಶಿಕ ಮೆನೇಜರ್ ನಾಗರಾಜ ರೆಡ್ಡಿ ತಿಳಿಸಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ಮುಖ್ಯ ಲೆಕ್ಕಾಧಿಕಾರಿ ಆನಂದ್, ಯೋಜನಾ ನಿರ್ದೇಶಕ ಕರೀಂ ಅಸಾದಿ, ನಬಾರ್ಡ್ ನ ಮ್ಯಾನೇಜರ್ ಸುಶೀಲ್ ನಾಯಕ್, ಆರ್ಬಿಐನ ಅಧಿಕಾರಿ ಮೋನಿ ರಾಜಾ ಬ್ರಹ್ಮ, ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ರಾಜಪ್ಪ ಮತ್ತಿತರರು ಇದ್ದರು. ಈ ನಡುವೆ 2025-26 ರ ಜಿಲ್ಲಾ ಸಾಲ ಯೋಜನೆಯ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''