ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಕ್ಲಬ್, ಆರ್.ಎಲ್.ಜಾಲಪ್ಪ ಇನ್‌ಸ್ಟಿಟ್ಯೂಷನ್ಸ್ ಹಾಗೂ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಶನಿವಾರ ಸ್ವಯಂಪ್ರೇರಿತ ಮೆಗಾ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಲಯನ್ಸ್ ಜಿಲ್ಲೆ 317 ಎಫ್‌ನ ರಕ್ತನಿಧಿ ಸಂಯೋಜಕ ಚಿನ್ನಪ್ಪ ಥಾಮಸ್ ಮಾತನಾಡಿ, ರಕ್ತದಾನ ಜೀವದಾನಕ್ಕೆ ಸಮಾನ. ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಪ್ರಗತಿ ಹೊಂದುತ್ತಿದ್ದರೂ ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಾಗಿಲ್ಲ. ದಿನೇ ದಿನೇ ಹೆಚ್ಚುತ್ತಿರುವ ರಕ್ತದ ಬೇಡಿಕೆಗೆ ಪೂರಕವಾಗಿ ದಾನಿಗಳ ಸಂಖ್ಯೆ ಹೆಚ್ಚಬೇಕು. ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಈ ಹಂತದಲ್ಲಿ ತನ್ನದೇ ಆದ ಮಹತ್ವ ಪಡೆದಿದೆ ಎಂದರು.
ಲಯನ್ಸ್ ಸಂಸ್ಥೆಯ ದೀಪಕ್ ಸುಮನ್ ಮಾತನಾಡಿ, ಯುವಜನತೆಯಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡುತ್ತಿರುವುದು ಆಶಾದಾಯಕ ಬೆಳವಣಿಗೆ. ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಇಂತಹ ಶಿಬಿರಗಳು ನಡೆಯುವುದರಿಂದ ಹಲವರ ಜೀವರಕ್ಷಣೆಗೆ ಸಹಕಾರಿಯಾಗುತ್ತದೆ ಎಂದರು.ಲಯನ್ಸ್ ಜಿಇಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್, ಆರ್.ಎಲ್.ಜಾಲಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಜೆ.ಆರ್.ರಾಕೇಶ್, ಮಧುಮೇಹ ವಿಭಾಗದ ಜಿಲ್ಲಾ ಸಂಯೋಜಕ ಎಲ್.ಎನ್.ಪ್ರದೀಪ್‌ಕುಮಾರ್, ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷ ಪ್ರೊ.ಕೆ.ಆರ್. ರವಿಕಿರಣ್, ಕಾರ್ಯದರ್ಶಿ ಕೆ.ಸಿ.ನಾಗರಾಜ್, ಖಜಾಂಚಿ ಎಸ್.ರವಿಕುಮಾರ್, ಮಾಜಿ ಕಾರ್ಯದರ್ಶಿ ಮುಕೇಶ್, ಜಿಯಾವುಲ್ಲಾ ಖಾನ್, ಎಸ್‌ಡಿಯುಐಆರ್‌ಎಸ್ ಪ್ರಾಂಶುಪಾಲ ಧನಂಜಯ್, ಲಯನ್ಸ್ ಕ್ಲಬ್ ಆಫ್ ಆರ್ಯಭಟ ಅಧ್ಯಕ್ಷ ಅಮಿತ್, ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಶೈಕ್ಷಣಿಕ ಘಟಕಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ದೊಡ್ಡಬಳ್ಳಾಪುರದ ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.