ವೈವಿಧ್ಯ ಪರಂಪರೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಿ: ಪ್ರೊ.ಸಿದ್ದರಾಮಯ್ಯ

KannadaprabhaNewsNetwork |  
Published : Nov 16, 2024, 12:31 AM IST
ಸಂಡೂರಿನ ಬಿಕೆಜಿ ಸಮೂಹ ಸಂಸ್ಥೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅನುಭವ ಮಂಟಪದ ರೂಪಕವನ್ನು ಪ್ರದರ್ಶಿಸಲಾಯಿತು. | Kannada Prabha

ಸಾರಾಂಶ

ನಮ್ಮಲ್ಲಿ ರಾಷ್ಟ್ರದ ಪರಂಪರೆಯ ಅರಿವು ಇದ್ದಲ್ಲಿ ದೇಶದ ಬಗ್ಗೆ ಗೌರವ ಭಾವನೆ ಬೆಳೆಯುತ್ತದೆ.

ಸಂಡೂರು: ಭಾರತ ದೇಶ ಬಹುಸಂಸ್ಕೃತಿಯ ರಾಷ್ಟ್ರ. ಇಲ್ಲಿ ವಿವಿಧತೆಯಲ್ಲಿ ಏಕತೆ ಕಾಣುತ್ತೇವೆ. ಬಹು ಸಂಸ್ಕೃತಿ ಹಾಗೂ ಪರಂಪರೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಎಂದು ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಬಿಕೆಜಿ ಸಮೂಹ ಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮಲ್ಲಿ ರಾಷ್ಟ್ರದ ಪರಂಪರೆಯ ಅರಿವು ಇದ್ದಲ್ಲಿ ದೇಶದ ಬಗ್ಗೆ ಗೌರವ ಭಾವನೆ ಬೆಳೆಯುತ್ತದೆ. ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಪ್ರತಿಯೊಬ್ಬರ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ. ಆದರೆ, ಇಂದು ಅದು ಮಾಯವಾಗುತ್ತಿದೆ. ಅದನ್ನು ಉಳಿಸಬೇಕಾದರೆ, ಬಾಷಾಭಿಮಾನ ಅವಶ್ಯಕ. ಶಾಲೆ ಪ್ರಾರಂಭವಾದ ಕೆಲವೇ ವರ್ಷಗಳಲ್ಲಿ ಉತ್ತಮ ಕಲಿಕಾ ವಾತಾವರಣವನ್ನು ಬಿಕೆಜಿ ಸಮೂಹ ಸಂಸ್ಥೆ ಒದಗಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ರಾಜ್ಯೋತ್ಸವ ಸಮಾರಂಭದ ವೇದಿಕೆಗಳು ಆತ್ಮವಿಮರ್ಶೆಯ ವೇದಿಕೆಯಾಗಬೇಕು. ಅವು ಕೇವಲ ಆಚರಣೆಗೆ ಸೀಮಿತವಾಗಬಾರದು ಎಂದು ಹೇಳುತ್ತಾ, ನಾಡಗೀತೆಯ ಅರ್ಥವನ್ನು ವಿವರವಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ವಸುಂಧರ ಭೂಪತಿ ಅವರು ಮಾತನಾಡಿ, ವಿಜ್ಞಾನದಿಂದ ಮತ್ತು ವೈಜ್ಞಾನಿಕ ಮನೋಭಾವನೆಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ರಾಜ್ಯದಲ್ಲಿ ಅನೇಕ ವೈಜ್ಞಾನಿಕ ಸಂಸ್ಥೆಗಳಿವೆ. ಕನ್ನಡವನ್ನು ಪ್ರತಿದಿನದ ವ್ಯವಹಾರದಲ್ಲಿ ಉಪಯೋಗಿಸುವ ಪ್ರಯತ್ನವನ್ನು ಮಾಡಬೇಕಿದೆ ಎಂದು ಹೇಳಿದರು.

ವಿವಿಧ ತರಗತಿಯ ವಿದ್ಯಾರ್ಥಿಗಳಿಂದ ಭರತನಾಟ್ಯ, ಜಾನಪದ ನೃತ್ಯ, ಪಟ್ಟದ ಕುಣಿತ, ಅನುಭವ ಮಂಟಪ, ಸಂಗೊಳ್ಳಿ ರಾಯಣ್ಣರ ಚರಿತ್ರೆಯ ನೃತ್ಯರೂಪಕವನ್ನು ಪ್ರಸ್ತುತ ಪಡಿಸಲಾಯಿತು. ಮೈಸೂರು ದಸರಾ ಮೆರವಣಿಗೆಯ ವೈಭವವನ್ನು ಸೃಷ್ಟಿಸಲಾಯಿತು.

ಬಿಕೆಜಿ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಕಮಲಮ್ಮ, ಸಂಸ್ಥಾಪಕ ಸದಸ್ಯರಾದ ಬಿ. ನಾಗನಗೌಡ, ಪ್ರಾಚಾರ್ಯ ಕೆ.ವಿ. ಮೋಹನ್ ರಾವ್, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ