ದಾಬಸ್‍ಪೇಟೆ: ಕನ್ನಡ ಭಾಷೆ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವ ಮೂಲಕ ಕನ್ನಡ ನಾಡಿನ ಬಗ್ಗೆ ಅಭಿಮಾನವನ್ನು ಮೂಡಿಸುವ ಕೆಲಸಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಸಾಹಿತಿ ಹಾಗೂ ಉಪನ್ಯಾಸಕ ಶಿವಲಿಂಗಯ್ಯ ತಿಳಿಸಿದರು.
ಪಟ್ಟಣದ ವಿಕೇರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಭೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕನ್ನಡ ಎಂಬುದು ಒಂದು ಭಾಷೆಯ ಹೆಸರು ಮಾತ್ರವಲ್ಲ, ಅದೊಂದು ಸಾಹಿತ್ಯದ ಹೆಸರಲ್ಲ, ಸಂಸ್ಕೃತಿಯ ಹೆಸರು ಕನ್ನಡ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಬೇಕು. ಇಂದು ಕರ್ನಾಟಕದಲ್ಲಿ ನಮ್ಮ ಭಾಷೆಯನ್ನು ಮರೆತು ಅನ್ಯಭಾಷೆಯತ್ತ ಜನರು ಒಲವು ತೋರುತ್ತಿರುವುದು ಬೇಸರ ತರುತ್ತಿದೆ ಎಂದು ಹೇಳಿದರು.ಶಾಲಾ ಕಾರ್ಯದರ್ಶಿ ಸ್ವರ್ಣಾಂಬ ರಾಜಶೇಖರ್ ಮಾತನಾಡಿ, ಕನ್ನಡ ನಾಡು, ಭಾಷೆ, ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ನಾಡಿನ ಜನರ ಬಗೆಗಿನ ಮನದ ಮಾತು, ಹೃದಯವಂತಿಕೆ, ಶೌರ್ಯ, ಪರಾಕ್ರಮ ಮಾನವೀಯತೆಯ ಬಗ್ಗೆ ಆಡಿರುವ ಮಾತುಗಳು ನಾಡಿನ ಚರಿತ್ರೆಯನ್ನು ತೋರುತ್ತಿದ್ದು, ಇದರ ಬಗ್ಗೆ ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಜ್ಞಾನಸಂಗಮ ಪಿಯು ಕಾಲೇಜಿನ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಕನ್ನಡ ಸಾಹಿತ್ಯವೇ ಜಗತ್ತಿನ ಎಲ್ಲಾ ಭಾಷಾ ಸಾಹಿತ್ಯಗಳಿಂದ ಶ್ರೇಷ್ಠವಾದುದು. ಮಕ್ಕಳಲ್ಲಿ ಕನ್ನಡದ ಸಾಹಿತ್ಯಕ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ವೃದ್ಧಿಸಬೇಕಿದೆ ಎಂದರು.ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರುದ್ರಯ್ಯ, ಶಾಲಾ ಸಂಸ್ಥಾಪಕ ಅಧ್ಯಕ್ಷ ಅಂಚೆಮನೆ ರಾಜಶೇಖರ್, ಶಿಕ್ಷಕ ಹೊನ್ನಶಾಮಯ್ಯ, ಮುಖ್ಯಶಿಕ್ಷಕಿ ಶಿಲ್ಪ, ಜಗದೀಶ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪೋಟೋ 2 :ದಾಬಸ್‍ಪೇಟೆಯ ವಿ ಕೇರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಉಪನ್ಯಾಸಕ ಶಿವಲಿಂಗಯ್ಯ ಹಾಗೂ ಶಾಲಾ ಆಡಳಿತ ಮಂಡಳಿಯವರು ಭಾಗವಹಿಸಿದ್ದರು.