ಇಬ್ಬರ ಬಲಿ ಪಡೆದ ಕಾಡಾನೆ ಸೆರೆ ಕಾರ್ಯಾಚರಣೆಗೆ ಆದೇಶ

KannadaprabhaNewsNetwork |  
Published : Nov 02, 2025, 02:15 AM IST

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮದಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡಿರುವ ಒಂಟಿ ಸಲಗ ಸೆರೆ ಹಿಡಿಯಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಐದಕ್ಕೂ ಹೆಚ್ಚು ಸಾಕಾನೆಗಳನ್ನು ಕಾರ್ಯಾ ಚರಣೆಗೆ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮದಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡಿರುವ ಒಂಟಿ ಸಲಗ ಸೆರೆ ಹಿಡಿಯಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಐದಕ್ಕೂ ಹೆಚ್ಚು ಸಾಕಾನೆಗಳನ್ನು ಕಾರ್ಯಾ ಚರಣೆಗೆ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ.

ಕಾಡಾನೆ ಸೆರೆ ಹಿಡಿಯದಿದ್ದಲ್ಲಿ ಇನ್ನೂ ಇಂತಹ ಘಟನೆ ಪುನರಾವರ್ತನೆಯಾಗುವ ಸಾಧ್ಯತೆಗಳಿದ್ದು ಸೆರೆ ಹಿಡಿಯುವ ಅತೀ ಅವಶ್ಯಕ. ಇದು ಈ ಕಾಡಾನೆ ಸೆರೆ ಹಿಡಿಯಲು ಪಳಗಿದ ಆನೆಗಳ ಸಹಾಯ ಪಡೆಯಬೇಕಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದರು.ಕಾಡಾನೆ ಸೆರೆಗೆ ಆನೆ ಶಿಬಿರದ ಪಳಗಿದ ಆನೆ ಮತ್ತು ಮಾವುತರನ್ನು ನಿಯೋಜಿಸಬೇಕು. ಸೆರೆ ಹಿಡಿದ ಕಾಡಾನೆಯನ್ನು ಯಾವ ಸ್ಥಳಕ್ಕೆ ಬಿಡಬೇಕು ಎಂದು ನಿರ್ದೇಶನ ನೀಡುವಂತೆ ಕೋರಿದ್ದರು. ಈ ಹಿನ್ನೆಲೆ ಯಲ್ಲಿ ಕೆರೆಕಟ್ಟೆ ವನ್ಯಜೀವಿ ವಲಯದಲ್ಲಿ ಇಬ್ಬರ ಪ್ರಾಣಹಾನಿಗೆ ಕಾರಣವಾದ ಗಂಡಾನೆಯನ್ನು ಸೆರೆ ಹಿಡಿಯಲು ಆದೇಶ ಹೊರಡಿಸಲಾಗಿದೆ.ಆನೆ ಗುರುತಿಸಿ ಸೆರೆ ಹಿಡಿದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದೊಡ್ಡ ಹರವೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲು ಅನುಮತಿ ನೀಡಲಾಗಿದೆ.ಕಾಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಟೀಮ್- ಎ ನಲ್ಲಿ ‘ಏಕಲವ್ಯ” ಪ್ರಶಾಂತ, ಧನಂಜಯ, ಹರ್ಷ, ಆನೆಗಳನ್ನು ದೊಡ್ಡ ಹರವೆಯಿಂದ ಟೀಮ್‌ - ಬಿ ಯಿಂದ “ಅಜಯ”, ದುಬಾರೆ ಮತ್ತು ಹಾರಂಗಿ ಆನೆ ಶಿಬಿರದಿಂದ ಆನೆಗಳನ್ನು ಬಳಸಿ ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಕ್ಷೇತ್ರ ಸಿಬ್ಬಂದಿ ಮತ್ತು ಸ್ಥಳೀಯರಿಗೆ ಯಾವುದೇ ಅಪಾಯವಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.

ಕೆರೆ ಪಂಚಾಯ್ತಿಯ ಕೆರೆಗೆದ್ದೆಯಲ್ಲಿ ಜಾನುವಾರುಗಳಿಗೆ ಮೇವು ತರಲು ಹೋಗಿದ್ದ ಹರೀಶ್‌ ಹಾಗೂ ಉಮೇಶ್‌ ಅವರನ್ನು ಆನೆ ತುಳಿದು ಹತ್ಯೆ ಮಾಡಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಾರ್ಕಳ ವನ್ಯಜೀವಿ ವ್ಯಾಪ್ತಿಯ ಕೆರೆಕಟ್ಟೆ ವನ್ಯಜೀವಿ ವಲಯದ ಅರಣ್ಯ ಪ್ರದೇಶಗಳಲ್ಲಿ ಒಂಟಿ ಕಾಡಾನೆ ಸಂಚರಿ ಸುತ್ತಿದ್ದು, ಕಳೆದ 10-ದ 15 ವರ್ಷಗಳಿಂದ ಆಗುಂಬೆ, ಕೆರೆಕಟ್ಟೆ, ಕುದುರೆಮುಖ ಪ್ರದೇಶಗಳಲ್ಲಿ ಒಂಟಿ ಸಲಗ ಓಡಾಡುತ್ತಾ ಹಲವಾರು ಕಡೆಗಳಲ್ಲಿ ದಾಳಿ ಮಾಡಿ ಬೆಳೆಗಳನ್ನು ಹಾಗೂ ತುಂಗಭದ್ರಾ ಮೀಸಲು ಅರಣ್ಯದ ಮುಡುಬಾ ಸುತ್ತು ಗಟ್ಟಿನ ಇಬ್ಬರ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದೆ.

ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌, ಶಾಸಕ ಟಿ.ಡಿ. ರಾಜೇಗೌಡ, ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಕೆರೆಕಟ್ಟೆ ಗ್ರಾಮದ ಮೃತರ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರದ ಚೆಕ್‌ ವಿತರಿಸಿದರು.

-- ಬಾಕ್ಸ್‌--

ಮತ್ತೆ ಕಾಣಿಸಿಕೊಂಡ ಕಾಡಾನೆ

ಇಬ್ಬರನ್ನು ಬಲಿ ತೆಗೆದುಕೊಂಡ ಒಂಟಿ ಸಲಗ ಮತ್ತೆ ಕಾಣಿಸಿಕೊಂಡಿದೆ. ಘಟನಾ ಸ್ಥಳದ ಸಮೀಪದ ಶೀರ್ಲು ಗ್ರಾಮದಲ್ಲಿ ಓಡಾಡಿದೆ. ಈ ಸಂದರ್ಭದಲ್ಲಿ ಪ್ರದೀಪ್‌ ಎಂಬುವವರ ಅಡಕೆ, ಬಾಳೆ ಗಿಡಗಳನ್ನು ಹಾಳು ಮಾಡಿದೆ. ಇದರಿಂದ ಆಸುಪಾಸಿನ ಗ್ರಾಮದ ಜನರಲ್ಲಿ ಆತಂಕ ಹೆಚ್ಚಾಗಿದೆ. ಆನೆ ಓಡಾಡುತ್ತಿರುವ ಹಿನ್ನಲೆ ಯಲ್ಲಿ ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜನೆ ಮಾಡಿದೆ.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ