ಕೃಷಿ ಇಲಾಖೆಯಲ್ಲಿ ನಡೆದ ತಾಲೂಕು ಕೃಷಿಕ ಸಮಾಜದ ಆಡಳಿತ ಮಂಡಳಿ ದ್ವೈ ಮಾಸಿಕ ಸಭೆ
ಮುಂದಿನ ದಿನಗಳಲ್ಲಿ ಮಣ್ಣು ಪರೀಕ್ಷಾ ಅಭಿಯಾನವನ್ನು ಕೃಷಿ, ತೋಟಗಾರಿಕೆ ಹಾಗೂ ಕಾಫಿ ಬೋರ್ಡ್ ಸಹಯೋಗದಲ್ಲಿ ಹಮ್ಮಿಕೊಂಡು ರೈತರಿಗೆ ಮಣ್ಣು ತೆಗೆಯುವ ವಿಧಾನ ಹಾಗೂ ಮಣ್ಣಿನ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ ಸಲಹೆ ನೀಡಿದರು.
ಕೃಷಿ ಇಲಾಖೆಯಲ್ಲಿ ನಡೆದ ತಾಲೂಕು ಕೃಷಿಕ ಸಮಾಜದ ಆಡಳಿತ ಮಂಡಳಿ ದ್ವೈ ಮಾಸಿಕ ಸಭೆಯಲ್ಲಿ ಮಾತನಾಡಿ, ರೈತರಿಗೆ ತಮ್ಮ ಜಮೀನಿನ ಮಣ್ಣಿನ ಫಲವತ್ತತೆ ಬಗ್ಗೆ ಅರಿವು ಅಥವಾ ಮಾಹಿತಿ ಇಲ್ಲದೆ ಇಳುವರಿ ಕಡಿಮೆ ಪಡೆಯುತ್ತಿದ್ದಾರೆ. ಆದ್ದರಿಂದ ರೈತರಿಗೆ ತಮ್ಮ ಜಮೀನಿನ ಮಣ್ಣನ್ನು ಯಾವ ಸಮಯಕ್ಕೆ ಪರೀಕ್ಷಿಸಬೇಕು. ಯಾವ, ಯಾವ ಗೊಬ್ಬರ ಹಾಕಬೇಕು ಹಾಗೂ ಮಣ್ಣಿಗೆ ಅನುಗುಣವಾಗಿ ಯಾವ ಬೆಳೆಗಳನ್ನು ಬೆಳೆದರೆ ಉತ್ತಮ ಇಳುವರಿ ಪಡೆಯ ಬಹುದು ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಕೃಷಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು.ಪಶು ವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಪ್ರೀತಮ್ ಮಾಹಿತಿ ನೀಡಿ, ಅನುಗ್ರಹ ಯೋಜನೆಯಡಿ, ಜಾನುವಾರು ಗಳು ಆಕಸ್ಮಿಕವಾಗಿ ಮರಣ ಹೊಂದಿದರೆ ₹15 ಸಾವಿರ, ಕುರಿಗಳು ಮರಣ ಹೊಂದಿದರೆ 3 ರಿಂದ 6 ತಿಂಗಳ ಮರಿಗಳಿಗೆ ₹5 ಸಾವಿರ, 6 ತಿಂಗಳ ಮೇಲ್ಪಟ್ಟ ಮರಿಗಳಿಗೆ ಏಳೂವರೆ ಸಾವಿರ ಪರಿಹಾರ ನೀಡಲು ಅವಕಾಶ ವಿದೆ. ಜಾನುವಾರುಗಳಿಗೆ ಸಂಬಂಧಪಟ್ಟ ಅಥವಾ ತುರ್ತು ಸಂದರ್ಭದಲ್ಲಿ ಪಶು ಆಸ್ಪತ್ರೆ ಸಹಾಯವಾಣಿ 1962 ಕ್ಕೆ ಕರೆ ಮಾಡಿದರೆ ಪಶು ಸಂಜೀವಿನಿ ವಾಹನಗಳ ಮೂಲಕ ಜಾನುವಾರುಗಳಿಗೆ ಮನೆ ಬಾಗಿಲಿಗೆ ಬಂದು ಉಚಿತ ಸೇವೆ ಒದಗಿಸಲಾಗುವುದು ಎಂದರು.
ಸಭೆಯಲ್ಲಿ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಎಚ್.ಕೆ.ನವೀನ್, ಸದಸ್ಯರಾದ ಎನ್.ಎಲ್.ತೀರ್ಥೇಶ್, ಎಚ್.ಎಂ. ನಾಗರಾಜ, ವೈ.ಎಸ್. ರವಿ, ಎಚ್.ಎನ್ ರವಿಶಂಕರ್, ಎನ್.ಎಸ್.ರಂಜಿತ್ , ಎಚ್.ಆರ್.ತಿಮ್ಮಯ್ಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.