ಹುಬ್ಬಳ್ಳಿ: ಇಲ್ಲಿನ ಸದ್ಗುರು ಶ್ರೀ ಸಿದ್ಧಾರೂಢರ ಮಠದಲ್ಲಿ ಭಾನುವಾರ ಶಿವರಾತ್ರಿ ಸಂಭ್ರಮ ಮನೆ ಮಾಡಿತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಶ್ರೀಮಠಕ್ಕೆ ಆಗಮಿಸಿ ಆರೂಢರ ದರ್ಶನ ಪಡೆದರು.
ಶಿವರಾತ್ರಿ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಶ್ರೀ ಸಿದ್ಧಾರೂಢರ ಹಾಗೂ ಗುರುನಾಥಾರೂಢರ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಸಾವಿರಾರು ಜನರು ಆರೂಢರ ಮೂರ್ತಿಗಳಿಗೆ ಅಭಿಷೇಕ ನೆರವೇರಿಸುತ್ತಿರುವುದು ಸಾಮಾನ್ಯವಾಗಿತ್ತು. ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಅಜ್ಜನ ದರ್ಶನ ಪಡೆದುಕೊಂಡರು.
ರಾತ್ರಿಯಿಡಿ ಜಾಗರಣೆ:ಭಾನುವಾರ ಮಹಾಶಿವರಾತ್ರಿ ಜಾಗರಣೆ ನಿಮಿತ್ತ ಶ್ರೀ ಸಿದ್ಧಾರೂಢರ ಮಠದಿಂದ ಗಣೇಶಪೇಟೆಯಲ್ಲಿರುವ ಜಡಿಮಠದ ವರೆಗೆ ಆರೂಢರ ಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರೊಂದಿಗೆ ತೆರಳಿ ಮರಳಿ ಶ್ರೀಮಠಕ್ಕೆ ಆಗಮಿಸಿತು. ಈ ವೇಳೆ ವಿವಿಧ ಕಲಾತಂಡಗಳು, ಭಜನಾ ತಂಡಗಳು ಪಾಲ್ಗೊಂಡು ಮೆರಗು ತಂದವು. ಬಳಿಕ ರಾತ್ರಿಯಿಡಿ ನಡೆದ ಜಾಗರಣೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಉಭಯ ಆರೂಢರ ಹಾಗೂ ಶಿವನಾಮ ಸ್ಮರಣೆ ಮಾಡುವ ಮೂಲಕ ಭಕ್ತಿ ಸಮರ್ಪಿಸಿದರು.