ಅಜೀಜಅಹ್ಮದ ಬಳಗಾನೂರ
ಸೆಟ್ ದೋಸೆ ಹಾಗೂ ಜಾಮೂನು ವಿತರಿಸುತ್ತಿರುವುದು ಹಳೇ ಹುಬ್ಬಳ್ಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ಸದ್ಭಕ್ತ ಮಂಡಳಿ. 10 ವರ್ಷಗಳಿಂದ ಅಜ್ಜನ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸುತ್ತ ಬಂದಿದೆ.
ಶ್ರೀ ಸದ್ಗುರು ಸಿದ್ಧಾರೂಢರ ಜಾತ್ರೆ ಹಾಗೂ ಶಿವರಾತ್ರಿ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 10ರಿಂದ ರಾತ್ರಿ 10ರ ವರೆಗೆ ದೋಸೆ, ಜಾಮೂನು ಹಾಗೂ ಚಿಕ್ಕು ಹಣ್ಣು ವಿತರಿಸಲಾಗಿದೆ. 1 ಲಕ್ಷಕ್ಕೂ ಅಧಿಕ ಬೆಣ್ಣಿದೋಸೆ ತಯಾರಿಕೆಗೆ 11.50 ಕ್ವಿಂಟಲ್ ಅಕ್ಕಿ ಹಿಟ್ಟು ಬಳಸಲಾಗಿದೆ. 11 ಕ್ವಿಂಟಲ್ ಹಿಟ್ಟಿನಿಂದ 50 ಸಾವಿರಕ್ಕೂ ಅಧಿಕ ಗುಲಾಬ್ ಜಾಮೂನು ಸಿದ್ಧಪಡಿಸಲಾಗಿತ್ತು. 40 ಸಾವಿರ ಚಿಕ್ಕು ಹಣ್ಣು ವಿತರಿಸಲಾಗಿದೆ. ಇದೇ ತಂಡದಿಂದ ಫೆ. 16ರಂದು ಬೆಳಗ್ಗೆ 7 ಗಂಟೆಗೆ 3 ಕ್ವಿಂಟಲ್ ಉಪ್ಪಿಟ್ಟು, 2 ಕ್ವಿಂಟಲ್ ಶಿರಾ, ಮಧ್ಯಾಹ್ನ 12ರಿಂದ ರಾತ್ರಿ 10ರ ವರೆಗೆ 20 ಕ್ವಿಂಟಲ್ ಅನ್ನ, 5 ಕ್ವಿಂಟಲ್ ಗೋದಿಹುಗ್ಗಿ, 2 ಕ್ವಿಂಟಲ್ ಬದನೆಕಾಯಿ ಪಲ್ಯೆಯ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಮಠದ ಕೈಲಾಸ ಮಂಟಪದ ಹಿಂಬದಿಯಲ್ಲಿ ಹಾಕಲಾಗಿರುವ ಭವ್ಯ ಪೆಂಡಾಲ್‌ನಲ್ಲಿ ಈ ಪ್ರಸಾದ ಸೇವೆಯು ನಡೆಯುತ್ತಿದೆ. ದೂರದ ಊರುಗಳಿಂದ ಆಗಮಿಸುವ ಭಕ್ತರು ಹೊಟ್ಟೆ ಹಸಿವಿನಿಂದ ಹೋಗಬಾರದು ಎಂಬ ಕಾರಣಕ್ಕೆ ಮಾಡಿಕೊಂಡು ಬರುತ್ತಿದ್ದೇವೆ ಎಂದು ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಎಸ್.ಎಂ. ರುದ್ರಯ್ಯ "ಕನ್ನಡಪ್ರಭ "ಕ್ಕೆ ತಿಳಿಸಿದರು.ಹೆಜ್ಜೆಹೆಜ್ಜೆಗೂ ಪ್ರಸಾದ ವಿತರಣೆ
ಸೋಮವಾರ ನಡೆಯುವ ಜಾತ್ರಾ ಮಹೋತ್ಸವಕ್ಕೆ ಕರ್ನಾಟಕ, ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಸೇರುವುದು ಸಾಮಾನ್ಯ. ಹೀಗೆ ಬರುವ ಭಕ್ತರಿಗೆ ಊಟ, ನೀರಿನ ತೊಂದರೆಯಾಗದಂತೆ ನೂರಾರು ಸಂಘ-ಸಂಸ್ಥೆಗಳು, ಅಜ್ಜನ ಸದ್ಭಕ್ತರು ಸ್ವಯಂಪ್ರೇರಿತವಾಗಿ ಅನ್ನಪ್ರಸಾದ ಕಾರ್ಯ ಕೈಗೊಳ್ಳುತ್ತ ಬರುತ್ತಿದ್ದಾರೆ.
ಎಲ್ಲೆಲ್ಲಿ ಸೇವೆ?ನಗರದ ಚೆನ್ನಮ್ಮ ವೃತ್ತದಿಂದ ಸಿದ್ಧಾರೂಢರ ಮಠಕ್ಕೆ ತೆರಳುವ ಮಾರ್ಗದುದ್ದಕ್ಕೂ ಪ್ರಸಾದ ಸೇವೆ ಇರಲಿದೆ. ಶ್ರೀಮಠದ ಅಕ್ಕಪಕ್ಕದಲ್ಲಿ, ಇಂಡಿಪಂಪ್ ವೃತ್ತ, ಗೋಕುಲ ರಸ್ತೆಯಿಂದ ಸಿದ್ಧಾರೂಢರ ಮಠಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ನೂರಾರು ಸಂಘ-ಸಂಸ್ಥೆಗಳು, ಭಕ್ತರು ಪ್ರಸಾದದ ವ್ಯವಸ್ಥೆ ಮಾಡುವುದು ವಿಶೇಷ.
ಏನೇನು ವಿತರಣೆ?ಪುಲಾವ್, ಶಿರಾ, ಉಪ್ಪಿಟ್ಟು, ಚುರುಮರಿ ವಗ್ಗರಣೆ, ಮೊಸರ ಅವಲಕ್ಕಿ, ಅವಲಕ್ಕಿ, ಖಾರಾ, ಚಿತ್ರಾನ್ನ, ಲಾಡು, ಬಗೆಬಗೆಯ ಹಣ್ಣುಗಳ ಜ್ಯೂಸ್, ಮಜ್ಜಿಗೆ, ಎಳನೀರು, ಕಲ್ಲಂಗಡಿ, ಸೇಬು, ದ್ರಾಕ್ಷಿ, ಬಾಳೆಹಣ್ಣು, ಹಾಲು, ಕಬ್ಬಿನ ಹಾಲು, ಕರ್ಜೂರ, ಚುರುಮರಿ ಪ್ಯಾಕೆಟ್, ಜ್ಯೂಸ್, ನೀರಿನ ಪ್ಯಾಕೇಟ್ ಹಾಗೂ ಬಾಟಲ್‌ಗಳನ್ನು ವ್ಯವಸ್ಥೆ ಮಾಡಲಾಗಿರುತ್ತದೆ. ಜತೆಗೆ ಪಾದಯಾತ್ರೆಯಲ್ಲಿ ಬರುವ ನೂರಾರು ಭಕ್ತರು ಆಯಾ ಗ್ರಾಮಗಳಿಂದ ಸಾವಿರಾರು ರೊಟ್ಟಿ ತಯಾರಿಸಿಕೊಂಡು ಬಂದು ಶ್ರೀಮಠದ ಆವರಣದಲ್ಲಿ ರೊಟ್ಟಿ ಊಟದ ವ್ಯವಸ್ಥೆ ಮಾಡಿರುತ್ತಾರೆ.ಉತ್ತಮ ಸ್ಪಂದನೆ
ಎಲ್ಲವೂ ಅಜ್ಜನ ಭಕ್ತರಿಂದಲೇ ನಡೆಯುತ್ತದೆ. ಪ್ರತಿ ವರ್ಷ ಜಾತ್ರೆಗೆ ಟ್ರಸ್ಟ್ ಕಮಿಟಿ ವತಿಯಿಂದಲೂ ಸೇವಾ ಮನೋಭಾವದಿಂದ ಪ್ರಸಾದ ವಿತರಿಸಲಾಗುತ್ತಿದೆ. ಇದಕ್ಕೆ ಭಕ್ತರಿಂದಲೂ ಉತ್ತಮ ಸ್ಪಂದನೆ ದೊರೆತಿದೆ ಎಂದು ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಸದಸ್ಯ ವೀರೇಶ ಮಟ್ಟಿ ತಿಳಿಸಿದ್ದಾರೆ.