ಭತ್ತದ ಉತ್ಪಾದಕತೆ ಹೆಚ್ಚಿಸಲು ರೈತರಲ್ಲಿ ಅರಿವು ಮೂಡಿಸಿ: ವಿ.ಎಸ್.ಅಶೋಕ್

KannadaprabhaNewsNetwork | Published : Jul 26, 2024 1:31 AM

ಸಾರಾಂಶ

ರೈತರು ಇತ್ತೀಚಿಗೆ ಸಣ್ಣ ಭತ್ತದ ಹೈಬ್ರಿಡ್ ತಳಿಗಳ ಕಡೆಗೆ ಮುಖ ಮಾಡಿರುವುದರಿಂದ ಹೈಬ್ರಿಡ್ ತಳಿಗಳು ರೋಗ ಕೀಟಬಾಧೆಗೆ ತುತ್ತಾಗಿ ಉತ್ಪಾದಕತೆಯಲ್ಲಿ ಇಳಿಮುಖ ಕಂಡು ಬರುತ್ತದೆ. ಹೀಗಾಗಿ ರೈತರು ಸರ್ಕಾರದ ಸಹಾಯಧನದಿಂದ ಲಭ್ಯವಿರುವ ಐಆರ್-64, ಎಂಟಿಯು-1001, ಎಂಟಿಯು-1010, ಜ್ಯೋತಿ ಹಾಗೂ ಆರ್ ಎನ್ಆರ್ ತಳಿಗಳನ್ನು ಬಳಕೆ ಮಾಡುವುದು ಸೂಕ್ತ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಭತ್ತದ ಉತ್ಪಾದಕತೆ ಕಡಿಮೆಯಾಗುತ್ತಿರುವುದರಿಂದ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರ ಮಾರಾಟಗಾರರು ಉತ್ಪಾದಕತೆ ಹೆಚ್ಚಿಸಲು ರೈತರಲ್ಲಿ ಅರಿವು ಮೂಡಿಸಬೇಕು ಎಂದು ಕೃಷಿ ನಿರ್ದೇಶಕ ವಿ.ಎಸ್. ಅಶೋಕ್ ಕರೆ ನೀಡಿದರು.

ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಿದ್ದ ತಾಲೂಕಿನ ಎಲ್ಲ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರ ಮಾರಾಟಗಾರರ, ಖಾಸಗಿ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಂಘದ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದರು.

ಭತ್ತದ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರ ಮಾರಾಟಗಾರರು ರೈತರ ಪ್ರತಿನಿಧಿಯಾಗಿ ಹೊಸ ತಾಂತ್ರಿಕ ಮಾಹಿತಿ ಅರಿತುಕೊಂಡು ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಭತ್ತದ ಉತ್ಪಾದಕತೆಯನ್ನು ಸರಿದೂಗಿಸಲು ರೈತರ ಪ್ರತಿನಿಧಿಯಾಗಿ ಎಲ್ಲ ಮಾರಾಟಗಾರರು ರೈತರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಭತ್ತ ಬಿತ್ತನೆ ಬೀಜದ ಜೊತೆ ಜೈವಿಕ ಗೊಬ್ಬರವಾದ ಅಝೋಸ್ಪೈರಿಲಂ ನ್ನು 1 ಎಕರೆಗೆ 400 ಗ್ರಾಂರಂತೆ ಬಳಸುವುದರಿಂದ ಬೆಳೆಗಳಿಗೆ ನೇರವಾಗಿ ಸಾರಜನಕ ಲಭ್ಯವಾಗುವುದು ಹಾಗೂ ಸಾರಜನಕವನ್ನು ಭೂಮಿಯಲ್ಲಿ ಹೆಚ್ಚು ಹಿಡಿದಿಟ್ಟುಕೊಂಡು ನಿಧಾನವಾಗಿ ಸಸ್ಯಗಳಲ್ಲಿ ಬಿಡುಗಡೆಯಾಗುವಂತೆ ಮಾಡಲು ನ್ಯಾನೋ ಯೂರಿಯಾ ಬಳಕೆ ಮಾಡುವಂತೆ ರೈತರಿಗೆ ತಿಳಿಸಲು ಸೂಚಿಸಿದರು.

ರೈತರು ಇತ್ತೀಚಿಗೆ ಸಣ್ಣ ಭತ್ತದ ಹೈಬ್ರಿಡ್ ತಳಿಗಳ ಕಡೆಗೆ ಮುಖ ಮಾಡಿರುವುದರಿಂದ ಹೈಬ್ರಿಡ್ ತಳಿಗಳು ರೋಗ ಕೀಟಬಾಧೆಗೆ ತುತ್ತಾಗಿ ಉತ್ಪಾದಕತೆಯಲ್ಲಿ ಇಳಿಮುಖ ಕಂಡು ಬರುತ್ತದೆ. ಹೀಗಾಗಿ ರೈತರು ಸರ್ಕಾರದ ಸಹಾಯಧನದಿಂದ ಲಭ್ಯವಿರುವ ಐಆರ್-64, ಎಂಟಿಯು-1001, ಎಂಟಿಯು-1010, ಜ್ಯೋತಿ ಹಾಗೂ ಆರ್ ಎನ್ಆರ್ ತಳಿಗಳನ್ನು ಬಳಕೆ ಮಾಡುವುದು ಸೂಕ್ತ ಎಂದರು.

ಸಹಾಯಕ ಕೃಷಿ ನಿರ್ದೇಶಕ ಬಿ.ಎಸ್.ದೀಪಕ್ ಮಾತನಾಡಿ, ಈಗಾಗಲೇ ಕಾವೇರಿ ಅಚ್ಚುಕಟ್ಟು ಪ್ರದೇಶಗಳ ನಾಲೆಗಳಲ್ಲಿ ನೀರು ಬಿಡಲಾಗಿದೆ. ಅಲ್ಲದೇ, ತಡವಾಗಿ ನಾಟಿ ಮಾಡುವುದರಿಂದ ಉತ್ಪಾದಕತೆ ಕಡಿಮೆಯಾಗುತ್ತದೆ. ಹೀಗಾಗಿ ರೈತರು ಎಚ್ಚೆತ್ತು ನಾಟಿ ಮಾಡಲು ಮುಂದಾಗಬೇಕು ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸುಮಾರು 930 ಕ್ವಿಂಟಲ್ ನಷ್ಟು ವಿವಿಧ ತಳಿಯ ಬಿತ್ತನೆ ಬೀಜ ಲಭ್ಯವಿವೆ. ರೈತರು ಸಸಿ ಮಡಿ ಹಾಗೂ ನಾಟಿ ಕಾರ್ಯವನ್ನು ಪ್ರಾರಂಭ ಮಾಡಬಹುದು ಎಂದರು.

ಮದ್ದೂರಿನ ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ) ಹಾಗೂ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಭಾಗವಹಿಸಿದರು.

Share this article