ಹಾನಗಲ್ಲ: ಮಳೆ ಕೊರತೆಯಿಂದಾಗಿ ರಾಜ್ಯಾದ್ಯಂತ ವಿದ್ಯುತ್ ಕೊರತೆ ಉಂಟಾಗಿದ್ದು, ತಾಲೂಕಿನಾದ್ಯಂತ ವಿದ್ಯುತ್ ಮಿತ ಬಳಕೆಗಾಗಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.
೨೦೨೩-೨೪ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನದ ಕ್ರಿಯಾಯೋಜನೆಯ ವಿವಿಧ ಕಾಮಗಾರಿಗಳ ಕುರಿತು ಮಾಹಿತಿ ಪಡೆದ ಶ್ರೀನಿವಾಸ ಮಾನೆ, ತಾಲೂಕಿನಲ್ಲಿ ಕೈಗೊಂಡಿರುವ ಶಾಲೆಗಳ ಕೊಠಡಿ, ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿಗಳ ಗುಣಮಟ್ಟದ ಮೇಲಾ ನಿಗಾ ವಹಿಸಲು ಸೂಚಿಸಿದರು.
ಅನಧಿಕೃತ ಕಟ್ಟಡಗಳ ನಿರ್ಮಾಣ ತಡೆಗಟ್ಟಬೇಕು. ಅನಧಿಕೃತ ಕಂಡು ಬಂದಲ್ಲಿ ಕ್ರಮ ಜರುಗಿಸಬೇಕು. ಕೆಲವು ಗ್ರಾಪಂಗಳಲ್ಲಿ ಅಭಿವೃದ್ಧಿ ಅಧಿಕಾರಿಗಳ ಗೈರು ಎದ್ದು ಕಾಣುತ್ತಿದ್ದು, ಬೆಳಗ್ಗೆ ೧೦ರಿಂದ ಮಧ್ಯಾಹ್ನ ೧೨ ಗಂಟೆ ವರೆಗೆ ಕಚೇರಿಯಲ್ಲಿದ್ದು, ಸಾರ್ವಜನಿಕರಿಗೆ ಸ್ಪಂದಿಸಬೇಕು. ಬರಗಾಲದ ದಿನಗಳನ್ನು ಸಮರ್ಥವಾಗಿ ಎದುರಿಸಲು ಈಗಿನಿಂದಲೇ ಅಗತ್ಯ ಸಿದ್ಧತೆ ಕೈಗೊಂಡು ಯುದ್ಧೋಪಾದಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿದರು.ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ, ಯೋಜನಾಧಿಕಾರಿ ಚಂದ್ರಶೇಖರ ಸೂಡಂಬಿ ಉಪಸ್ಥಿತರಿದ್ದರು.