ಕೇಂದ್ರ ಸರ್ಕಾರದ ಯೋಜನೆಗಳ ಅರಿವು ಮೂಡಿಸಿ: ಕೋಟಾ ಶ್ರೀನಿವಾಸ್‌ ಪೂಜಾರಿ

KannadaprabhaNewsNetwork | Published : Sep 13, 2024 1:32 AM

ಸಾರಾಂಶ

ಚಿಕ್ಕಮಗಳೂರು, ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸಿದರೆ ಸಾರ್ವಜನಿಕರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

- ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಗತಿ ಪರಿಶೀಲನಾ ಸಭೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸಿದರೆ ಸಾರ್ವಜನಿಕರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಯೋಜನೆ ಮೂಲಕ ಬಡಗಿ, ದೋಣಿ ತಯಾರಿಕೆ, ಕುಂಬಾರರು, ಅಕ್ಕಸಾಲಿಗ, ಕಮ್ಮಾರರು, ಶಿಲ್ಪಿಗಳು, ಮಾಲಾಕಾರರು ಸೇರಿದಂತೆ ವಿವಿಧ ಸಾಂಪ್ರದಾಯಿಕ ಕಸುಬುದಾರರು ಹಾಗೂ ಕರಕುಶಲ ಕರ್ಮಿಗಳ ಕೈ ಬಲಪಡಿಸುವುದರೊಂದಿಗೆ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸುವಲ್ಲಿ ಯೋಜನೆ ಪಾತ್ರ ಮಹತ್ವದ್ದಾಗಿದೆ. ಇದರೊಂದಿಗೆ ಕೇಂದ್ರದ ಯೋಜನೆಗಳಾದ ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ, ಸ್ಟಾಟ್ ಅಪ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ ಮತ್ತು ವಿವಿಧ ಯೋಜನೆಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಉದ್ಯಮದಾರರ ಜೀವನ ಮಟ್ಟ ಸುಧಾರಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿ ಎಂದರು.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಅರ್ಜಿ ಸಲ್ಲಿಸಿ ಅನುಮೋದನೆಗೊಂಡ ಅರ್ಹ ಅಭ್ಯರ್ಥಿಗಳಿಗೆ ಅವರ ಐಚ್ಛಿಕ ವಿಷಯದಲ್ಲಿ 7 ದಿನಗಳ ಗುಣಮಟ್ಟ ತರಬೇತಿ ನೀಡಲಾಗುತ್ತದೆ. ತರಬೇತಿ ಸಂದರ್ಭದಲ್ಲಿ 500 ರು.ಗಳ ಸ್ಟೈಫಂಡ್ ಹಾಗೂ ತರಬೇತಿ ನಂತರದಲ್ಲಿ 15 ಸಾವಿರ ರು. ವೆಚ್ಚದ ಉಚಿತ ಟೂಲ್ ಕಿಟ್ ಒದಗಿಸಿ ಪ್ರಮಾಣ ಪತ್ರ ನೀಡಲಾಗುತ್ತದೆ. ನಂತರದಲ್ಲಿ ಸಾಲ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಲ್ಲಿ ಮೊದಲನೇ ಹಂತದ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಶೇ. 5 ರಷ್ಟು ಬಡ್ಡಿ ದರದಲ್ಲಿ ಒಂದು ಲಕ್ಷ ರು. ಸಾಲ ನೀಡಲಾಗುತ್ತದೆ. ತರಬೇತಿ ನಂತರದಲ್ಲಿ ಹೆಚ್ಚಿನ ಸಾಲ ಒದಗಿಸುವ ಮಹತ್ವದ ಯೋಜನೆಯಾಗಿದೆ. ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ಬಡ ಕುಶಲ ಕರ್ಮಿಗಳು ಹಾಗೂ ನಿರುದ್ಯೋಗಿಗಳು ತಮ್ಮ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಪ್ರತಿಯೊಬ್ಬರಿಗೂ ಯೋಜನೆ ಅರಿವು ಮೂಡಿಸಿ ಅರ್ಹರು ಯೋಜನೆಗಳ ಫಲ ಪಡೆದುಕೊಳ್ಳುವಂತೆ ಕ್ರಮವಹಿಸಿ ಎಂದರು.

ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, ಜಿಲ್ಲೆಯಲ್ಲಿ ಪಿ.ಎಂ ವಿಶ್ವಕರ್ಮ ಯೋಜನೆಯಡಿ ಒಟ್ಟು 34164 ಅರ್ಜಿಗಳು ಸ್ವೀಕೃತವಾಗಿದ್ದು, 6002 ಅಭ್ಯರ್ಥಿಗಳ ತರಬೇತಿಗೆ ರಾಜ್ಯಮಟ್ಟದಿಂದ ಅನುಮೋದನೆ ಬಂದಿದೆ. ಇವುಗಳಲ್ಲಿ 2186 ಅಭ್ಯರ್ಥಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ತಿರಸ್ಕೃತಗೊಂಡ ಅರ್ಜಿಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಒಟ್ಟು 11 ತರಬೇತಿ ಕೇಂದ್ರಗಳಿದ್ದು ಸದ್ಯ 4 ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಸಣ್ಣ ಪುಟ್ಟ ತಾಂತ್ರಿಕ ದೋಷಗಳಿಂದ ಉಳಿದ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲು ವಿಳಂಬವಾಗಿದ್ದು, ಶೀಘ್ರದಲ್ಲೆ ತರಬೇತಿ ಪ್ರಾರಂಭಿಸ ಲಾಗುವುದು ಎಂದು ಹೇಳಿದರು.

ತರಬೇತಿ ಪಡೆದ 2186 ಅಭ್ಯರ್ಥಿಗಳಲ್ಲಿ 1060 ಮಂದಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದು, 501 ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲಿಸಿ ಅನುಮೋದನೆಗೊಳಿಸಿ ಕೆಲವರ ಖಾತೆಗೆ ಹಣ ಜಮೆ ಮಾಡಲಾಗಿದೆ. ಉಳಿದ ಅರ್ಹ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ ಸಾಲ ದೊರಕಿಸಿ ಕೊಡಲು ಅಧಿಕಾರಿಗಳಿಗೆ ಕ್ರಮವಹಿಸಲು ಸೂಚಿಸಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಎಚ್‌.ಸಿ. ಪ್ರಶಾಂತ್, ಜಂಟಿ ನಿರ್ದೇಶಕ ಮಹೇಶ್ ಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಚಂದ್ರಶೇಖರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಲ್ಮರುಡಪ್ಪ ಸೇರಿದಂತೆ ವಿಶ್ವಕರ್ಮ ಯೋಜನೆ ಸಲಹಾ ಸಮಿತಿ ಸದಸ್ಯರು ಹಾಗೂ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳ ವ್ಯವಸ್ಥಾಪಕರು ಹಾಜರಿದ್ದರು.

12 ಕೆಸಿಕೆಎಂ 5

ಚಿಕ್ಕಮಗಳೂರು ಜಿಪಂ ಮಿನಿ ಸಭಾಂಗಣದಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಪ್ರಗತಿ ಪರಿಶೀಲನಾ ಸಭೆ ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಪಂ ಸಿಇಒ ಕೀರ್ತನಾ ಇತರೆ ಅಧಿಕಾರಿಗಳು ಇದ್ದರು.

Share this article