ಎಲ್ಲ ವರ್ಗಗಳ ಬಡವರಿಗೂ ಬಿಪಿಎಲ್‌ ಕಾರ್ಡ್ ಕಲ್ಪಿಸಿ: ಸಿಪಿಐ

KannadaprabhaNewsNetwork |  
Published : Dec 01, 2024, 01:30 AM IST
30ಕೆಡಿವಿಜಿ3, 4-ಎಲ್ಲಾ ವರ್ಗದ ಬಡವರಿಗೂ ಬಿಪಿಎಲ್ ಕಾರ್ಡ್‌ ನೀಡಲು, ಆದಾಯ ಮಿತಿ ಹೆಚ್ಚಿಸಲು ಒತ್ತಾಯಿಸಿ ದಾವಣಗೆರೆಯಲ್ಲಿ ಸಿಪಿಐ ಜಿಲ್ಲಾ ಘಟಕದಿಂದ ಪ್ರತಿಭಟಿಸಲಾಯಿತು. | Kannada Prabha

ಸಾರಾಂಶ

ಎಲ್ಲ ವರ್ಗಗಳ ಬಡವರಿಗೂ ಬಿಪಿಎಲ್‌ ಕಾರ್ಡ್ ಸೌಲಭ್ಯ ನೀಡುವಂತೆ ಹಾಗೂ ಬಿಪಿಎಲ್ ಕಾರ್ಡ್‌ಗಳಿಗೆ ವಿಧಿಸಿದ ಆದಾಯ ಮಿತಿಯನ್ನು ಹೆಚ್ಚಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಭಾರತ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ಪ್ರತಿಭಟಿಸಲಾಯಿತು.

- ಆದಾಯ ಮಿತಿ ಹೆಚ್ಚಿಸುವಂತೆ ಒತ್ತಾಯಿಸಿ ಪ್ರತಿಭಟನೆ, ಸರ್ಕಾರಕ್ಕೆ ಮನವಿ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಎಲ್ಲ ವರ್ಗಗಳ ಬಡವರಿಗೂ ಬಿಪಿಎಲ್‌ ಕಾರ್ಡ್ ಸೌಲಭ್ಯ ನೀಡುವಂತೆ ಹಾಗೂ ಬಿಪಿಎಲ್ ಕಾರ್ಡ್‌ಗಳಿಗೆ ವಿಧಿಸಿದ ಆದಾಯ ಮಿತಿಯನ್ನು ಹೆಚ್ಚಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಭಾರತ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ಪ್ರತಿಭಟಿಸಲಾಯಿತು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪಕ್ಷದ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಪ್ರತಿಭಟಿಸಿದ ಪದಾಧಿಕಾರಿಗಳು, ಕಾರ್ಯಕರ್ತರು ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಕಚೇರಿ ಮೂಲಕ ಮುಖ್ಯಮಂತ್ರಿ, ಆಹಾರ ಸಚಿವರಿಗೆ ಮನವಿ ಅರ್ಪಿಸಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ಬಡವರ್ಗದವರ ಬಿಪಿಎಲ್‌ ಕಾರ್ಡ್‌ ರದ್ದುಗೊಳಿಸಿರುವುದು ದುಡಿಯುವ ವರ್ಗದ ಕುಟುಂಬಗಳಿಗೆ ಮಾರಕವಾಗಿದೆ. ಈ ಮೂಲಕ ರಾಜ್ಯ ಸರ್ಕಾರವು ಬಡವರ ಅನ್ನವನ್ನೇ ಕಸಿಯುತ್ತಿದೆ. ಬಿಪಿಎಲ್ ಕಾರ್ಡ್‌ಗಳಿಗೆ ವಿಧಿಸಿದ್ದ ಆದಾಯ ಮಿತಿ ತಕ್ಷಣ ಹೆಚ್ಚಿಸಬೇಕು. ದುಡಿಯುವ ವರ್ಗಕ್ಕೆ ನೀಡಿರುವ ಎಪಿಎಲ್ ಕಾರ್ಡ್‌ಗಳ ಬದಲಾಗಿ, ಬಿಪಿಎಲ್ ಕಾರ್ಡ್‌ಗಳನ್ನು ನೀಡಬೇಕು ಎಂದರು.

ಬಿಪಿಎಲ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಸಾಕಷ್ಟು ಕಾಲಾವಕಾಶ ನೀಡಬೇಕು. ಬಿಪಿಎಲ್ ಕಾರ್ಡ್ ರದ್ದುಪಡಿಸಿದ್ದರಿಂದ ಬಡವರ್ಗದವರು ಆಸ್ಪತ್ರೆಯಲ್ಲಿ ಚಿಕಿತ್ಸೆ, ಶಿಕ್ಷಣ, ವಿದ್ಯಾರ್ಥಿ ವೇತನ, ಉದ್ಯೋಗ ಇತರೇ ಸೌಲಭ್ಯ, ಅವಕಾಶಗಳಿಂದಲೂ ವಂಚಿತರಾಗುವಂತಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು ಬಯೋಮೆಟ್ರಿಕ್‌ ಮತ್ತು ಒಟಿಪಿ ಹೇಳಲು ಸರ್ವರ್ ಸಮಸ್ಯೆಯಿಂದ ಸಾಮಾನ್ಯ ಜನರಿಗೆ ಪಡಿತರ ಆಹಾರ ಧಾನ್ಯ ಪಡೆಯಲು ತೀವ್ರ ತೊಂದರೆಯಾಗುತ್ತಿದೆ. ಅದನ್ನು ಮೊದಲು ಸರಿಪಡಿಸಲಿ ಎಂದು ದೂರಿದರು.

ಪಕ್ಷದ ಹಿರಿಯ ಮುಖಂಡ ಆವರಗೆರೆ ಎಚ್.ಜಿ.ಉಮೇಶ ಮಾತನಾಡಿ, ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ತೂಕದಲ್ಲಿ ತೀವ್ರ ಅನ್ಯಾಯ, ವಂಚನೆಯಾಗುತ್ತಿದೆ. ಅಂತಹ ನ್ಯಾಯಬೆಲೆ ಅಂಗಡಿಗಳ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಪಡಿತರ ಆಹಾರ ಧಾನ್ಯ ವಿತರಿಸಲು ಇಡೀ ತಿಂಗಳು ಪಡಿತರ ಅಂಗಡಿಗಳನ್ನು ತೆರೆದಿಡಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಬಡವರ ಅನ್ನ, ಅವಕಾಶ ಕಸಿಯುವ ಕೆಲಸವನ್ನು ಸರ್ಕಾರ ಮಾಡಬಾರದು. ಆದಾಯ ಮಿತಿ ಹೆಚ್ಚಿಸುವ ಮೂಲಕ ಬಿಪಿಎಲ್ ಕಾರ್ಡ್‌ ನೀಡಲು ಸರ್ಕಾರ ಮುಂದಾಗಲಿ ಎಂದು ಒತ್ತಾಯಿಸಿದರು.

ಮುಖಂಡರಾದ ಇಫ್ಟಾದ ಐರಣಿ ಚಂದ್ರು, ಮಹಮ್ಮದ್ ರಫೀಕ್, ಎನ್.ಎಚ್. ರಾಮಪ್ಪ, ಎ.ಮರಿಯಪ್ಪ, ನಿಟುವಳ್ಳಿ ಬಸವರಾಜ, ಸುರೇಶ್ ಯರಗುಂಟೆ, ಸರೋಜ, ಎನ್.ಟಿ. ತಿಪ್ಪೇಶ, ಎಚ್.ಪರಶುರಾಮ, ನಾಗಮ್ಮ, ಚಮನ್ ಸಾಬ್‌, ಶಿವಕುಮಾರ, ಜಯಪ್ಪ, ಮಹಮ್ಮದ್ ಬಾಷಾ, ರುದ್ರೇಶ, ಗದಿಗೇಶ ಪಾಳೇದ, ಎಚ್.ಪಿ. ಉಮಾಪತಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

- - - -30ಕೆಡಿವಿಜಿ3, 4:

ಎಲ್ಲ ವರ್ಗದ ಬಡವರಿಗೂ ಬಿಪಿಎಲ್ ಕಾರ್ಡ್‌ ನೀಡಲು, ಆದಾಯ ಮಿತಿ ಹೆಚ್ಚಿಸಲು ಒತ್ತಾಯಿಸಿ ದಾವಣಗೆರೆಯಲ್ಲಿ ಸಿಪಿಐ ಜಿಲ್ಲಾ ಘಟಕದಿಂದ ಪ್ರತಿಭಟಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ವಕೀಲರಿಗೆ ಮಾಹಿತಿ ನೀಡದಿದ್ರೆ ಕ್ರಮ : ಹೈ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌